ADVERTISEMENT

ಗ್ರಾಮೀಣರಲ್ಲಿ ಜನಪದ ಕಲೆ ಕಣ್ಮರೆ: ವಿಷಾದ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 6:15 IST
Last Updated 20 ಅಕ್ಟೋಬರ್ 2012, 6:15 IST

ಚಾಮರಾಜನಗರ: `ಜನಪದ ಸಂಪ ತ್ತನ್ನು ಜನರ ಬದುಕಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕಿದೆ~ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ ಅಭಿಪ್ರಾಯಪಟ್ಟರು.

ನಗರದ ರೋಟರಿ ಭವನದಲ್ಲಿ ಗುರುವಾರ ರಂಗವಾಹಿನಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನಾಟಿ ಪದ, ಸುಗ್ಗಿಪದ, ಬೀಸುವ ಕಲ್ಲಿನ ಪದ, ಸಂಪ್ರದಾಯದ ಮದುವೆಯ ಹಾಡುಗಳು ಈಗ ಮರೆಯಾಗಿವೆ ಎಂದು ವಿಷಾದಿಸಿದರು.

ಗಡಿ ಜಿಲ್ಲೆಯು ಜನಪದ ಕಲೆಗಳ ತವರೂರು. ಮಲೆಮಹದೇಶ್ವರ, ಮಂಟೇಸ್ವಾಮಿಯಂತಹ ಸಾಂಸ್ಕೃತಿಕ ಸಂತರು ಜನಪದರ ನಾಲಿಗೆ ಮೇಲೆ ನಿತ್ಯವೂ ನಲಿದಾಡುತ್ತಿದ್ದಾರೆ. ಈ ನೆಲ ನಿಜಕ್ಕೂ ಪುಣ್ಯಭೂಮಿ. ಇಲ್ಲಿನ ನೈಜ ಜನಪದ ಕಲಾವಿದರಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ, ರೋಟರಿ ಅಧ್ಯಕ್ಷ ಮಹೇಶ್, ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ಮಹದೇವಪ್ಪ, ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ದಲಿತ ಮುಖಂಡ ವೆಂಕಟರಮಣಸ್ವಾಮಿ, ಸುಭಾಷ್ ಮಾಡ್ರಳ್ಳಿ, ವೆಂಕಟೇಶ್‌ಬಾಬು, ಘಟಂ ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.