ADVERTISEMENT

ಗ್ರಾಹಕರೇ ಹಕ್ಕು ಚಲಾಯಿಸಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 9:25 IST
Last Updated 2 ಫೆಬ್ರುವರಿ 2011, 9:25 IST

ಚಾಮರಾಜನಗರ: ‘ಸಾರ್ವಜನಿಕರು ವ್ಯಾಪಾರ, ಉದ್ದಿಮೆ ಸೇವೆಗಳಿಂದ ವಂಚನೆಗೆ ಒಳಗಾದ ವೇಳೆ ಯಾವುದೇ ಭಯವಿಲ್ಲದೆ ಗ್ರಾಹಕರ ಹಕ್ಕು ಚಲಾಯಿಸಬೇಕು’ ಎಂದು ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಇ. ಮಹದೇವಪ್ಪ ಕರೆ ನೀಡಿದರು. ನಗರದ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ವಾರ್ತಾ ಇಲಾಖೆಯಿಂದ ನಡೆದ ಗ್ರಾಹಕರ ಹಕ್ಕುಗಳ ಜಾಗೃತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯದ ಬಳಕೆಯ ವಸ್ತು ಖರೀದಿಯಲ್ಲಿ ಗ್ರಾಹಕರು ಮೋಸ ಹೋಗುವ ಸಾಧ್ಯತೆಯಿದೆ. ಕಲಬೆರಕೆ ವಸ್ತು ಬಗ್ಗೆ ಅರಿವು ಇಲ್ಲದೇ ಕೊಂಡು ಕೊಳ್ಳುವುದು ಉಂಟು. ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿವಳಿಕೆ ಹೊಂದಿದಲ್ಲಿ ಯಾವುದೇ ಮೋಸ, ವಂಚನೆ ಯನ್ನು ಪ್ರಶ್ನಿಸಿ ನ್ಯಾಯ ಪಡೆಯಬಹುದು ಎಂದರು. ಖರೀದಿಸಿದ ವಸ್ತುವಿನ ಸೇವೆಗೆ ಅಧಿಕೃತ ರಶೀದಿ ಪಡೆದುಕೊಳ್ಳಬೇಕು. ಆ ವಸ್ತುವಿನ ಸೇವೆಯಲ್ಲಿ ನ್ಯೂನತೆ ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಯಾವುದೇ, ಶುಲ್ಕವಿಲ್ಲದೆ ನ್ಯಾಯಾಲಯ ಗ್ರಾಹಕರಿಗೆ ಪರಿಹಾರ ಒದಗಿಸಲಿದೆ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿ ಸಿರುವ ಪಡಿತರ ದರ ಪ್ರಮಾಣ ಬಗ್ಗೆ ಫಲಕ ಹಾಕಲು ಸೂಚಿಸಲಾಗಿದೆ.  ಹೆಚ್ಚುವರಿ ದರ, ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಡಿತರ ನೀಡುವುದು ಕಂಡುಬಂದರೆ ದೂರು ಸಲ್ಲಿಸಬಹುದು. ಅಂಥ ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳ ಲಾಗುತ್ತದೆ ಎಂದರು. ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್ ಪ್ರಾಸ್ತಾವಿಕ ಮಾತ ನಾಡಿದರು. ಆಹಾರ ಮತ್ತು ನಾಗರಿಕ ಇಲಾಖೆಯ ಗಂಗಾಧರ್, ವಾರ್ತಾ ಸಹಾಯಕ ಎ. ರಮೇಶ್, ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ರತ್ನಮ್ಮ, ಮಲ್ಲೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.