ADVERTISEMENT

ಚುನಾವಣಾ ವೆಚ್ಚ ವಿವರ ಸಲ್ಲಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:49 IST
Last Updated 13 ಏಪ್ರಿಲ್ 2013, 5:49 IST

ಚಾಮರಾಜನಗರ: `ವಿಧಾನಸಭಾ ಚುನಾವಣೆಗೆ ಪ್ರತಿದಿನ ಮಾಡುವ ವೆಚ್ಚದ ವಿವರಗಳನ್ನು ಅಭ್ಯರ್ಥಿಗಳು ನಿಗದಿತ ವಹಿಯಲ್ಲಿ ದಾಖಲು ಮಾಡಿ ಕಡ್ಡಾಯವಾಗಿ ಸಲ್ಲಿಸಬೇಕು' ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಧರ್ಮೇಂದ್ರಕುಮಾರ್ ಹಾಗೂ ಪಂಕಜ್‌ಸಿಂಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ವೆಚ್ಚ ವಿವರ ಮಾರ್ಗದರ್ಶನ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಅಭ್ಯರ್ಥಿ ಚುನಾವಣೆಗೆ ಗರಿಷ್ಠ ರೂ.16 ಲಕ್ಷ ಮಿತಿಯಲ್ಲಿ ವೆಚ್ಚ ಮಾಡಬಹುದು. ಇದನ್ನು ಅಭ್ಯರ್ಥಿಗಳು ಮೀರುವಂತಿಲ್ಲ. ಈ ಹಿನ್ನೆಲೆಯಲ್ಲಿ ಖರ್ಚು-ವೆಚ್ಚ ಪರಿಶೀಲನೆಗಾಗಿ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಗೆ ಚುನಾವಣಾ ಆಯೋಗದಿಂದ ಎ, ಬಿ ಹಾಗೂ ಸಿ ಮಾದರಿಯ ಪ್ರತ್ಯೇಕ ವಹಿಗಳನ್ನು ನೀಡಲಾಗುವುದು. ಇದರಲ್ಲಿ ಅಭ್ಯರ್ಥಿಗಳು ಮಾಡುವ ಪ್ರತಿ ವಾಹನ, ಚುನಾವಣಾ ಪ್ರಚಾರ ಸಾಮಗ್ರಿ, ಸಭೆ, ಸಮಾರಂಭ ಸೇರಿದಂತೆ ಎಲ್ಲ ಬಗೆಯ ಖರ್ಚು-ವೆಚ್ಚಗಳನ್ನು ವಹಿಯಲ್ಲಿರುವ ಪ್ರತಿ ಕಲಂನಲ್ಲಿ ನಮೂದು ಮಾಡಬೇಕು ಎಂದರು.

ಅಭ್ಯರ್ಥಿಗಳಿಗೆ ನೀಡಲಾಗುವ ವಹಿಯಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷ, ಪ್ರಾಯೋಜಕರು ನೀಡುವ ಹಣ, ವಸ್ತುಗಳು ಇನ್ನಿತರ ಯಾವುದೇ ರೂಪದಲ್ಲಿ ಪಡೆಯುವ ಹಣಕಾಸನ್ನು ತಪ್ಪದೆ ನಮೂದಿಸಬೇಕು. ಎಲ್ಲ ಖರ್ಚು ವಿವರವನ್ನು ಒಳಗೊಂಡ ವಹಿಯನ್ನು ಪ್ರತಿದಿನ ನಿರ್ವಹಿಸಬೇಕು. ಅಭ್ಯರ್ಥಿಗಳು ವಹಿಯಲ್ಲಿ ಸಹಿ ಮಾಡಿ, ಅಭ್ಯರ್ಥಿ ಅಥವಾ ಅವರ ಪರ ಏಜೆಂಟರು ಪ್ರತಿದಿನ ಸಲ್ಲಿಸಬೇಕು ಎಂದು ಸೂಚಿಸಿದರು.

ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿರಬೇಕು. ಚುನಾವಣೆ ವೆಚ್ಚಕ್ಕಾಗಿ ಮಾಡಲಾದ ಯಾವುದೇ ರೂ.20 ಸಾವಿರ ಗಳಿಗೂ ಮೀರಿದ ಹಣವನ್ನು ಚೆಕ್ ಮೂಲಕವೇ ಪಾವತಿ ಮಾಡಬೇಕು. ರೂ.20 ಸಾವಿರ ಒಳಗಿನ ಹಣವನ್ನು ಚೆಕ್ ರಹಿತವಾಗಿ ನೀಡಲಾಗಿದ್ದರೂ ಬ್ಯಾಂಕಿನ ಖಾತೆಯಿಂದಲೇ ಹಣ ನೀಡಿರುವ ಬಗ್ಗೆ ಖಾತರಿ ನೀಡಬೇಕು. ಈ ಎಲ್ಲ ಖರ್ಚುಗಳ ಬಗ್ಗೆ ನಿಗಾ ವಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮಾತನಾಡಿ, `ಅಭ್ಯರ್ಥಿಗಳು ಚುನಾವಣೆಗೆ ವಾಹನಗಳನ್ನು ಬಳಸಲು ಅನುಮತಿ ಪಡೆಯಬೇಕು. ಸಭೆ, ಸಮಾರಂಭ, ಪ್ರಚಾರ ಸಾಮಗ್ರಿ, ವಾಹನ ಬಾಡಿಗೆ ಇನ್ನಿತರ ವೆಚ್ಚಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇರಬಹುದಾದ ವಾಸ್ತವ ದರವನ್ನು ನಿಗದಿ ಮಾಡಲಾಗಿದೆ. ಈ ಪ್ರಕಾರ ಅಭ್ಯರ್ಥಿಗಳ ಖರ್ಚನ್ನು ಲೆಕ್ಕ ಹಾಕಲಾಗುವುದು. ಅಭ್ಯರ್ಥಿಗಳು ಕಡಿಮೆ ದರ ನಮೂದು ಮಾಡಿದರೂ ಸಹ ವಾಸ್ತವವಾಗಿ ನಿಗದಿ ಮಾಡಲಾಗಿರುವ ದರವನ್ನೇ ವೆಚ್ಚಕ್ಕೆ ಪರಿಗಣಿಸಲಾಗುವುದು' ಎಂದರು.

ಅಭ್ಯರ್ಥಿಗಳು ಮಾಡುವ ವೆಚ್ಚದ ಮಾಹಿತಿ, ಪಡೆದುಕೊಳ್ಳುವ ಅನುಮತಿ ಇನ್ನಿತರ ಆಧಾರದ ಮೇಲೆ ಚುನಾವಣಾಧಿಕಾರಿ ಕಚೇರಿಯಲ್ಲಿ ಸಹ ಪ್ರತ್ಯೇಕವಾಗಿ ಷ್ಯಾಡೊ ವಹಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳು ಯಾವುದೇ ವೆಚ್ಚವನ್ನು ಮರೆ ಮಾಚಲು ಸಾಧ್ಯವಿಲ್ಲ. ಪಾರ ದರ್ಶಕವಾಗಿ ವೆಚ್ಚ ಪ್ರಕ್ರಿಯೆಗೆ ಅಭ್ಯರ್ಥಿಗಳು ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್ ಸೋಮಶೇಖರಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.