ADVERTISEMENT

ಜನಪರ ಯೋಜನೆಗಳ ಪ್ರಚಾರಕ್ಕೆ ಒತ್ತು ನೀಡಿ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:31 IST
Last Updated 19 ಡಿಸೆಂಬರ್ 2013, 6:31 IST

ಚಾಮರಾಜನಗರ: ರಾಜ್ಯ ಸರ್ಕಾರ ಹಲವು ಜನಪರ ಯೋಜನೆ ಜಾರಿಗೊಳಿಸಿದೆ. ವಾರ್ತಾ ಇಲಾಖೆಯು ಆಯೋಜಿ­ಸಿ­ರುವ ವಿಶೇಷ ಪ್ರಚಾರಾಂದೋಲನದ ಮೂಲಕ ಗ್ರಾಮೀಣ ಭಾಗದಲ್ಲಿ ಈ ಕುರಿತು ಪ್ರಚಾರ ನೀಡಬೇಕು. ಆಗ ಯೋಜನೆಗಳು ಫಲಪ್ರದವಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡ­ಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಇಲಾಖೆಯಿಂದ ಆಯೋಜಿಸಿರುವ ವಿಶೇಷ ಪ್ರಚಾರಾಂದೋಲನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಾರ್ತಾ ಇಲಾಖೆಯ ವಾಹನ ಇಂದಿನಿಂದ 12ದಿನದ­ವರೆಗೆ ಜಿಲ್ಲೆಯ ಗ್ರಾಮಗಳಲ್ಲಿ ಸಂಚರಿಸಲಿದೆ. ಛಾಯಾಚಿತ್ರ ಪ್ರದರ್ಶನ, ಬೀದಿ ನಾಟಕ, ತೊಗಲು ಬೊಂಬೆ ನಾಟಕದ ಮೂಲಕ ಸರ್ಕಾರದ ಜನಪರ ಯೋಜನೆ ಕುರಿತು ಗ್ರಾಮೀಣರಿಗೆ ಅರಿವು ಮೂಡಿಸಲಿದೆ.

ಪ್ರಚಾರಕ್ಕಾಗಿ ಇಲಾಖೆ­ಯು ಹಲವು ಕಾರ್ಯಕ್ರಮ ರೂಪಿಸಿದ್ದು, ಇತರೇ ಜಿಲ್ಲೆಯ ಕಲಾ ತಂಡಗಳಿಗೂ ಆಹ್ವಾನ ನೀಡಲಾಗಿದೆ.
ಸ್ಥಳೀಯ ಅಧಿಕಾರಿಗಳು ಅಗತ್ಯ ಸಿದ್ಧತೆಕೈಗೊಂಡು ಯೋಜನೆಗಳ ಬಗ್ಗೆ ಗ್ರಾಮೀಣರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರತ್ಯೇಕ ಒಕ್ಕೂಟ: ಮೈಸೂರು- ಚಾಮರಾಜನಗರ ಹಾಲು ಒಕ್ಕೂಟವನ್ನು ಬೇರ್ಪಡಿಸಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಪ್ರಾರಂಭಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೆರಡು ದಿನದಲ್ಲಿ ತಾಲ್ಲೂಕಿನ ಮಂಗಲ ಸಮೀಪ 30 ಎಕರೆ ಜಮೀನು  ಗುರುತಿಸಲಾಗುವುದು ಎಂದು ಹೇಳಿದರು.

ಚಾಮರಾಜನಗರ- ಗುಂಡ್ಲುಪೇಟೆ ತಾಲ್ಲೂಕಿನ 297 ಹಳ್ಳಿಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗು­ವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ 1,700 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಆ ಮೂಲಕ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ವಾಪಸಾದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ತಿಲಾಂಜಲಿ ನೀಡಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಮಾತನಾಡಿ, `ನಗರಸಭೆಯಿಂದ ನಗರದ ವ್ಯಾಪ್ತಿ ಶೌಚಾಲಯ ನಿರ್ಮಾಣಕ್ಕೆ 100 ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದ್ದು, ಕೇವಲ 30 ಅರ್ಜಿ ಬಂದಿವೆ. ಕಾರ್ಯಕ್ರಮದ ಉದ್ದೇಶ ಹೆಚ್ಚು ಪ್ರಚಾರ­ವಾ­ಗಿಲ್ಲ. ಹೀಗಾಗಿ, ಗ್ರಾಮೀಣ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳ ಉದ್ದೇಶ ಕುರಿತು ಹೆಚ್ಚು ಪ್ರಚಾರ ನಡೆಸಬೇಕಿದೆ ಎಂದರು. 

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಹೋಬಳಿ ಮಟ್ಟದಲ್ಲಿ ಜನಪರ ಯೋಜನೆ ಕುರಿತು ಪ್ರಚಾರ ಮಾಡಬೇಕು. ಜತೆಗೆ, ಜಿಲ್ಲೆಯ ಸಮಸ್ಯೆಗಳ ಕುರಿತು ವಾರ್ತಾ ಇಲಾಖೆಯು ಸರ್ಕಾರದ ಗಮನ ಸೆಳೆಯಬೇಕು ಎಂದರು.

ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎಚ್. ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ತಾಲ್ಲೂಕು ಪಂಚಾ­ಯಿತಿ ಉಪಾಧ್ಯಕ್ಷೆ ಪಾರ್ವತಮ್ಮ, ಮೈಸೂರು ವಾರ್ತಾ ಇಲಾಖೆಯ ಉಪ ನಿರ್ದೇಶಕ ಎ.ಆರ್. ಪ್ರಕಾಶ್, ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.