ADVERTISEMENT

ಜಾನುವಾರುಗಳಿಗೆ ಕಾಡುವ ಬಾಧೆ ಬೇಕಿದೆ ಮದ್ದು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 6:05 IST
Last Updated 26 ಫೆಬ್ರುವರಿ 2012, 6:05 IST

ಯಳಂದೂರು: `ಭಾರತದ ಕೃಷಿ ಆರ್ಥಿಕತೆಯಲ್ಲಿ ಬಡವರ ಪಾಲಿನ ಕಾಮಧೇನು ಹಸು-ಎತ್ತು. ಭೂರಹಿತರ `ಆಲ್ ಟೈಮ್ ಮನಿ~ ಎಂದೇ ಗುರುತಿಸುವ ಕುರಿ, ಕೋಳಿ, ಆಡುಗಳು ನಿರುದ್ಯೋಗಿಗಳ ಪಾಲಿನ ಆಶಾಕಿರಣ. ಆಧುನಿಕ ಮಿಶ್ರ ಬೇಸಾಯದ ಭಾಗವಾದ ಜಾನುವಾರುಗಳನ್ನು    ವೈಜ್ಞಾನಿಕವಾಗಿ ಪೋಷಿಸಿ      ಆದಾಯ ವೃದ್ಧಿಸಿಕೊಳ್ಳುತ್ತಿದ್ದಾರೆ. ಶ್ವೇತ ಕ್ರಾಂತಿಗೆ ಕಾರಣವಾದ ಹಸು, ದುಡಿಮೆಯ ಭಾಗವಾದ ಎತ್ತು ಇಂದು ಗ್ರಾಮೀಣರ ಸರ್ವಸ್ವ.~

ಆದರೆ, ತಾಲ್ಲೂಕಿನಲ್ಲಿ ಋತುಮಾನಕ್ಕೆ ಅನುಗುಣವಾಗಿ ಇವುಗಳನ್ನು ಕಾಡುವ ಕೆಲವು ರೋಗಗಳು ಉತ್ಪಾದಕತೆ ಕುಗ್ಗಿಸುತ್ತಿವೆ. ವಿದ್ಯುತ್ ಅವಘಡ, ಬೆಂಕಿ ಆಕಸ್ಮಿಕಗಳು ಪಶುಗಳನ್ನು ಇನ್ನಿಲ್ಲದಂತೆ ಬಾಧಿಸುವುದೂ ಉಂಟು. ಆಸ್ಥೆ ವಹಿಸಿದರೆ ಇವುಗಳನ್ನು ರೋಗಗಳಿಂದ ರಕ್ಷಿಸಬಹುದು. ಉತ್ತಮ ಗಾಳಿ, ಬೆಳಕು ಕೂಡಿರುವ ಕೊಟ್ಟಿಗೆ ನಿರ್ಮಿಸಿ ಇತರ ಪ್ರಾಣಿಗಳಿಗೆ ರೋಗ ಹರಡದಂತೆ ತಡೆಗಟ್ಟಲು ಕೃಷಿಕರು ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎನ್ನುತ್ತಾರೆ ಪಶು ಇಲಾಖೆಯ ತಜ್ಞರು.

ಆರ್ಥಿಕವಾಗಿ ಹಿಂದುಳಿದವರು ಡೆಕ್ಕನಿ, ಬಳ್ಳಾರಿ, ಹಾಸನ, ಕೆಂಗುರಿ ತಳಿಗಳನ್ನು ಸಾಕುತ್ತಾರೆ. ಉಸ್ಮಾನಾಬಾದಿ, ಮಲಬಾರಿ, ನಂದಿಗುರ್ಗ, ಶಿರೋಹಿ, ಜಮುನಾಪಾರಿ ಆಡಿನ ತಳಿಗಳು ತಾಲ್ಲೂಕಿನ ವಾತಾವರಣಕ್ಕೆ ಹೊಂದಿಕೊಂಡು ಬದುಕುತ್ತವೆ. ಕೆಲವಕ್ಕೆ ಈಗಾಗಲೇ ಪಿಪಿಆರ್ ಬಾಧೆ ಕಾಣಿಸಿಕೊಂಡಿದೆ. ಉತ್ತಮ ವಸತಿ, ಪಕ್ಕಾ ಮನೆ ನಿರ್ಮಿಸಿ ಇವುಗಳನ್ನು ಪೋಷಿಸಿದರೆ ರೋಗ ನಿಯಂತ್ರಿಸಬಹುದು. ಶುದ್ಧ ಹಾಲು ಹಾಗೂ ಮಾಂಸವನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಮಾಲಿಕರದೂ ಪಾಲಿದೆ.

ಕಾಲ ಕಾಲಕ್ಕೆ ಕಾಣುವ ಕುರಿಸಿಡುಬು ಜನವರಿಯಲ್ಲೂ, ಕಾಲು ಮತ್ತು ಬಾಯಿಬೇನೆ ಮಾರ್ಚ್- ಸೆಪ್ಟೆಂಬರ್‌ನಲ್ಲೂ, ಗಂಟಲು ಬೇನೆ ಮೇ ವೇಳೆಗೆ, ಪಿಪಿಆರ್ ಹಾಗೂ ಕರಳುಬೇನೆ ಜೂನ್‌ನಲ್ಲೂ, ನೆರಡಿ ರೋಗ ಜೂನ್-ಜುಲೈನಲ್ಲೂ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಪಶುವೈದ್ಯರು.

`33 ಗ್ರಾಮಗಲ್ಲಿ ಜಾನುವಾರು ಸಂಖ್ಯೆಯೂ ಕಡಿಮೆ ಇದೆ. ಪಟ್ಟಣ ಸೇರಿದಂತೆ 6 ಪ್ರಾಥಮಿಕ ಪಶು  ಚಿಕಿತ್ಸಾ ಕೇಂದ್ರಗಳು ಇಲ್ಲಿವೆ. 16,380 ದನಕರು, ಎಮ್ಮೆ, 11 ಸಾವಿರ ಕುರಿಗಳು, 7,700 ಮೇಕೆಗಳು ಇವೆ. ಪ್ರಸಕ್ತ ವರ್ಷದಲ್ಲಿ ಫೆ. 1 ರಿಂದ 23 ರವರೆಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡಲಾಗಿದೆ. ಈ ಕಾರ್ಯಕ್ರಮ ತಾಲ್ಲೂಕಿನ ಎಲ್ಲಾ ಗ್ರಾಮಗಳನ್ನು ಒಳಗೊಂಡಿದೆ~.

`ಕುರಿಮೇಕೆಗಳಿಗೆ ಪಿಪಿಆರ್ ರೋಗ ತಡೆಗಟ್ಟುವ ಚುಚ್ಚುಮದ್ದು ಹಾಕುವ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ. ಮುಂಬರುವ ಬೇಸಿಗೆಯಲ್ಲಿ ಪ್ರಾಣಿಗಳಿಗೆ ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ಮನೆಮದ್ದು ಮಾಡುವ ಮುನ್ನ ಪಶುವೈದ್ಯರಿಗೆ ತೋರಿಸಿ ಮಾಹಿತಿ ಪಡೆಯಬೇಕು~ ಎಂದು ಇಲಾಖೆಯ ಸಹಾಯಕ ನಿರ್ದೆಶಕ ಡಾ. ಬಾಲಸುಂದರ್ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.