ADVERTISEMENT

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ

ಬಾಣಹಳ್ಳಿ; ದೇವಾಲಯ ಪ್ರವೇಶ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:57 IST
Last Updated 13 ಡಿಸೆಂಬರ್ 2012, 10:57 IST

ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಬಾಣಹಳ್ಳಿಯಲ್ಲಿ ದೇವಾಲಯ ಪ್ರವೇಶ ಸಂಬಂಧ ತಲೆದೋರಿದ್ದ ವೈಮನಸ್ಸು ಬಗೆಹರಿಸಲು ಜಿಲ್ಲಾಧಿಕಾರಿ ಎನ್.ಜಯರಾಂ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು. ಸಭೆಯಲ್ಲಿ ಉಭಯ ಕೋಮಿನ ಮುಖಂಡರು ಶಾಂತಿ ಕಾಪಾಡುವ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಯರಾಂ, ಗ್ರಾಮದ ಜನತೆ ಹಳೆಯ ಕಹಿ ನೆನಪುಗಳನ್ನು ಮರೆತು ಸಾಮರಸ್ಯದಿಂದ ಬಾಳ್ವೆ ನಡೆಸಬೇಕು. ದೇವಾಲಯಕ್ಕೆ ಎಲ್ಲ ಜನರಿಗೂ ಮುಕ್ತ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಪ್ರಸ್ತುತ ಉಂಟಾಗಿದ್ದ ಪರಿಸ್ಥಿತಿಯನ್ನು ಮರೆತು ಇಡೀ ಗ್ರಾಮದ ಜನತೆ ಒಂದಾಗಬೇಕು. ಸೌಹಾರ್ದಯುತ ವಾತಾವರಣ ಉಂಟು ಮಾಡಲು ಪ್ರತಿಯೊಬ್ಬರೂ ಸಹಕರಿಸಬೇಕು. ಇದಕ್ಕಾಗಿ ಗ್ರಾಮದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಗ್ರಾಮದಲ್ಲಿ ಜನತೆ ಹಳೆಯ ಘಟನೆಗಳನ್ನು ಮೆಲುಕು ಹಾಕದೆ ಅಣ್ಣ ತಮ್ಮಂದಿರಂತೆ ಇರಬೇಕು, ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆಯಬೇಕು. ಯಾವುದೇ ಸೂಕ್ಷ್ಮ ವಿಚಾರ, ಸನ್ನಿವೇಶ ಉದ್ಭವಿಸಿದಾಗ ಜನತೆ ತಾವಾಗಿಯೇ ಯಾವುದೇ ಅಚಾತುರ್ಯ ನಿರ್ಧಾರ ಕೈಗೊಳ್ಳಬಾರದು.

್ರಮದ ಮುಖಂಡರೊಂದಿಗೆ ಚರ್ಚಿಸಿ ವಿವೇಕಯುತ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಂಕರರಾಜು, ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ಎಸ್.ಪ್ರತಿಭಾ, ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಮುಖಂಡರಾದ ವೆಂಕಟರಮಣ, ಆಣಗಳ್ಳಿ ಬಸವರಾಜು, ಕೊಡಸೋಗೆ ಶಿವಬಸಪ್ಪ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.