ADVERTISEMENT

ಜಿಲ್ಲಾಧಿಕಾರಿ ಭೇಟಿ, ಮನವೊಲಿಕೆ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 5:40 IST
Last Updated 10 ಆಗಸ್ಟ್ 2012, 5:40 IST

ಯಳಂದೂರು: ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಸರ್ಕಾರಿ ಖರಾಬ್ ಜಮೀನಿನ ವಿವಾದಕ್ಕೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಗುರುವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರ ಜೊತೆ ನಡೆಸಿದ ಮಾತುಕತೆ ವಿಫಲವಾಯಿತು.

ಸಂಜೆ 6 ಗಂಟೆಗೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ತಹಶೀಲ್ದಾರ್ ಶಿವನಾಗಯ್ಯ ಜಾಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ವಿವಾದಕ್ಕೆ ಸಂಬಂಧಿಸಿದಂತೆ 8 ಗುಂಟೆಯಲ್ಲಿರುವ ಶಾಲೆ, 5 ಗುಂಟೆಯಲ್ಲಿರುವ ದೇಗುಲ, 4 ಗುಂಟೆಯಲ್ಲಿ ನಿರ್ಮಿಸಿರುವ ಅಕ್ರಮ ಮನೆ ಹಾಗೂ 22 ಗುಂಟೆ ಖಾಲಿ ಜಮೀನಿನ ಪರಿಶೀಲನೆ ನಡೆಸಿದರು.

ಸಿಗದ ಗ್ರಾಮಸ್ಥರ ಒಪ್ಪಿಗೆ: ಈ ಜಾಗದ ಬಗ್ಗೆ ಮಾಹಿತಿ ಪರಿಶೀಲಿಸಿದಾಗ ಈ ಸಮಸ್ಯೆ ಬಗೆಹರಿಸಲು ಕೆಲವು ತಾಂತ್ರಿಕ ತೊಂದರೆಗಳು ಕಾರಣವಾಗಿದೆ. ಇದು ಇನ್ನೂ ಕೆಲ ಕಾಲ ತೆಗೆದುಕೊಳ್ಳುವುದರಿಂದ ಅದುವರೆ ವಿಗೂ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಜಿಲ್ಲಾಧಿ ಕಾರಿ ಮನವಿ ಮಾಡಿದರು. ಜೊತೆಗೆ ದೇಗುಲದ ಅರ್ಚಕ ಸಿದ್ದಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಿ ಶಾಲೆಯ ಪಕ್ಕದಲ್ಲಿರುವ 22 ಗುಂಟೆ ಜಮೀನಿನಲ್ಲಿ ಮಕ್ಕಳನ್ನು ಆಡಲು ಅನುಮತಿ ನೀಡಬೇಕು. ಇಲ್ಲಿ ನಿರ್ಮಿಸಿರುವ ಗೇಟ್ ಹಾಗೂ ಕಾಂಪೌಂಡ್‌ನ್ನು ತೆಗೆಸಬೇಕು. ಶಾಲಾ ಮಕ್ಕಳಿಗೆ ಗ್ರಾಮಸ್ಥರಿಗೆ ಯಾವುದೇ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು. ಇದಕ್ಕೆ ಅರ್ಚಕರೂ ಒಪ್ಪಿದರು.

ಆದರೆ ಗ್ರಾಮಸ್ಥರು ಇದನ್ನು ಒಪ್ಪಲಿಲ್ಲ. ವಿವಾದಿತ ಜಮೀನನ್ನು ಶಾಲೆಗೆ ವರ್ಗಾಯಿಸುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ. ಈ ಸಮಸ್ಯೆ ಬಗೆಹರಿಯುವ ವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಯಾವುದೇ ಉತ್ತರ ನೀಡದೆ ಹಿಂದಿರುಗಿದ ಘಟನೆ ಜರುಗಿತು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಒಕ್ಕೊರಲ ಧ್ವನಿಗೂಡಿಸಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಿಪಿಐ ಕೀರ್ತಿಕುಮಾರ್, ಪಿಎಸ್‌ಐ ಚಿಕ್ಕರಾಜ್‌ಶೆಟ್ಟಿ ನೇತೃತ್ವ ದಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.