ಚಾಮರಾಜನಗರ: ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಬಿ. ರಾಚಯ್ಯ ಜೋಡಿರಸ್ತೆಯ ಉನ್ನತೀಕರಣಕ್ಕೆ ಕಾಲ ಕೂಡಿಬಂದಿದೆ. ಹಲವು ವರ್ಷದಿಂದ ಜೋಡಿರಸ್ತೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಭುವನೇಶ್ವರಿ ವೃತ್ತದಿಂದ ರಾಮಸಮುದ್ರದ ಅರಳಿಕಟ್ಟೆವರೆಗೂ ಅಭಿವೃದ್ಧಿಗೆ ನಗರಸಭೆ, ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾಪ ಸಿದ್ಧಪಡಿವುದು ಮುಂದುವರಿದಿತ್ತು.
ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ರಸ್ತೆ, ಮಳೆ ನೀರು ಚರಂಡಿ ನಿರ್ಮಾಣ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಈ ಹಿಂದೆ ನಗರ ಸಭೆಗೆ ಮಂಜೂರಾಗಿದ್ದ ರೂ.12 ಕೋಟಿ ವಿಶೇಷ ಅನುದಾನದಡಿ ಜೋಡಿರಸ್ತೆ ಅಭಿವೃದ್ಧಿಗೆ ನಿರ್ಧರಿಸಲಾಗಿತ್ತು. ಆದರೆ, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ನಡುವಿನ ಸಮನ್ವಯದ ಕೊರತೆಯಿಂದ ಈ ಅನುದಾನ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಪಾಲಾಯಿತು.
ಈಗ ಜೋಡಿರಸ್ತೆ ಅಭಿವೃದ್ಧಿಗೆ ಕಂಕಣ ಕೂಡಿಬಂದಿದೆ. ನಗರಸಭೆಗೆ ಈಗ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಣಣಗಳ ಅಭಿವೃದ್ಧಿ ಯೋಜನೆಯಡಿ ಮೂಲ ಸೌಕರ್ಯಕ್ಕಾಗಿ ರೂ 10 ಕೋಟಿ ನಿಗದಿಯಾಗಿದೆ. ಈ ಅನುದಾನ ಬಳಸಿಕೊಂಡು ಜೋಡಿರಸ್ತೆ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜೋಡಿರಸ್ತೆ ಅಭಿವೃದ್ಧಿ ಸಂಬಂಧ ಪ್ರಸ್ತಾವ ಸಿದ್ಧಪಡಿಸಲು ಸೂಚಿಸಿದ್ದಾರೆ. ಹೀಗಾಗಿ, ನೆನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿಗೆ ಮರುಜೀವ ಸಿಕ್ಕಿದೆ.
ರಸ್ತೆ ವಿಭಜಕದಿಂದ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಲಭ್ಯವಿರುವ ಸ್ಥಳ ಕೇವಲ 6.30 ಮೀಟರ್. ಪಾದಚಾರಿ ರಸ್ತೆ ಅಗಲ ಸುಮಾರು 1ರಿಂದ 4 ಮೀಟರ್‌ವರೆಗೆ ಅಂಕುಡೊಂಕಾದ, ಉಬ್ಬುತಗ್ಗುಗಳಿದ ಕೂಡಿದ ಕಲ್ಲುಚಪ್ಪಡಿ ಹಾಗೂ ಮಣ್ಣಿನ ರಸ್ತೆಯಾಗಿದೆ. ಎರಡು ಬದಿಯಲ್ಲಿ ವಾಹನಗಳ ನಿಲುಗಡೆಗೆ ಯಾವುದೇ ವ್ಯವಸ್ಥೆಯಿಲ್ಲ. ಹೀಗಾಗಿ, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ನೀರು ಪೂರೈಕೆ ಕೊಳವೆಯು ರಸ್ತೆಯ ಮಧ್ಯದಲ್ಲಿ ಹಾದುಹೋಗಿದೆ. ವಾಹನಗಳ ಸಂಚಾರದ ಪರಿಣಾಮ ದುರಸ್ತಿಗೆ ಬರುವುದು ಸರ್ವೆ ಸಾಮಾನ್ಯ. ಹೀಗಾಗಿ, ಕೊಳವೆ ಸ್ಥಳಾಂತರಿಸಬೇಕಿದೆ. ಇನ್ನೊಂದೆಡೆ ಪಾದಚಾರಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಅಡ್ಡಾದಿಡ್ಡಿಯಾಗಿವೆ. ಇದರ ಪರಿಣಾಮ ಜನರು ಸಂಚರಿಸಲು ಕಷ್ಟಕರವಾಗಿದೆ. ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ಪಡೆಯಲು ರಸ್ತೆ ಅಗೆಯುವುದು ನಡೆಯುತ್ತಲೇ ಇರುತ್ತದೆ. ಹೀಗಾಗಿ, ರಸ್ತೆ ನಿರ್ವಹಣೆ ದುಬಾರಿಯಾಗಿದೆ.
ಜೋಡಿರಸ್ತೆ ವಿಸ್ತರಿಸಿ ಎರಡು ಬದಿಯಲ್ಲಿ ಸುಗಮವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜತೆಗೆ, ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಪಾದಚಾರಿ ರಸ್ತೆಯ ಅಗಲ ಹೆಚ್ಚಿಸಬೇಕು. ಕಾಂಕ್ರಿಟ್ ಚರಂಡಿ ವ್ಯವಸ್ಥೆ ಮಾಡಬೇಕು. ಕಲ್ಲುಗಳು ಅಥವಾ ಟೈಲ್ಸ್ ಜೋಡಣೆಯಿಂದ ಉತ್ತಮ ಪಾದಚಾರಿ ರಸ್ತೆ ನಿರ್ಮಿಸಬೇಕು ಎನ್ನುವುದು ನಾಗರಿಕರ ಒತ್ತಾಯ.
`ಕೂಡಲೇ, ಜಿಲ್ಲಾಡಳಿತ, ನಗರಸಭೆ ಆಡಳಿತ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಲಭಿಸುವ ಅನುದಾನದಡಿ ಜೋಡಿರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ತ್ವರಿತವಾಗಿ ಕಾಮಗಾರಿ ಆರಂಭಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು' ಎನ್ನುವುದು ಚಾಲಕ ಶಿವರಾಜ್ ಅವರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.