ADVERTISEMENT

ಟೊಮೆಟೊ, ಬದನೆ ಬೆಳೆಗಾರರಿಗೆ ಸಂಕಷ್ಟ!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:34 IST
Last Updated 5 ಡಿಸೆಂಬರ್ 2012, 8:34 IST

ಯಳಂದೂರು: ಹಣ್ಣಾಗುವ ಮೊದಲೇ ಉದುರುತ್ತಿರುವ ಟೊಮೆಟೊ, ಅಲ್ಲಲ್ಲಿ ತೂತು ಬಿದ್ದು ಬಾಡಿ ನಂಜಾದ ಬದನೆ, ಇಳುವರಿ ಕೊಡದ ಮೆಣಸಿನಕಾಯಿ.

  ಇದು ಗೂಳಿಪುರದ ರೈತರ ಹೊಲದಲ್ಲಿ ಕಂಡುಬರುವ ಸ್ಥಿತಿ. ತರಕಾರಿ ಬೆಳೆದು ಲಾಭ ಮಾಡಿ ಕೊಳ್ಳುವ ರೈತರ ಆಸೆಗೆ ತಣ್ಣೀರು ಎರಚಿದಂತೆ ಆಗಿದ್ದು, ಬೆಲೆ ಇದ್ದರೂ ರೈತರ ಗೋಳು ಹೇಳತೀರದಾಗಿದೆ.

ತಾಲ್ಲೂಕಿನ ಅಲ್ಲಲ್ಲಿ ಮಿಶ್ರ ಕೃಷಿಯ ಭಾಗವಾಗಿ ತರಕಾರಿ ಬೆಳೆ ಬೆಳೆಯುತ್ತಾರೆ. ಮಳೆಯ ಕೊರತೆಯಿಂದ ವಾಣಿಜ್ಯ ಬೆಳೆ ಕಬ್ಬು ಬೆಳೆಯುವುದರ ಬದಲಿಗೆ ಗೂಳೀಪುರ ನಾಗನಾಯಕ ಎಂಬುವರು ತಮ್ಮ ಒಂದು ಎಕರೆ ನೀರಾವರಿ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳಾದ ಟೊಮೆಟೋ, ಬದನೆ, ಮೆಣಸಿನಕಾಯಿ ಬೆಳೆದಿದ್ದರು.

ಆದರೆ, ಎರಡು ತಿಂಗಳ ನಂತರ ಬಿಟ್ಟ ಟೊಮೆಟೋ,  ಬದನೆ ಬಾಡಲು ತೊಡಗಿವೆ. ನಂತರ ಕೊಳೆತು ಉದುರಿದವು. ಬದನೆ ಹಳದಿ ಬಣ್ಣಕ್ಕೆ  ತಿರುಗಿ ನೆಲ ಸೇರಿದೆ. ಈಗ ಈ ತರಕಾರಿಗಳಿಗೆ ಒಳ್ಳೆ ಧಾರಣೆ ಇದೆ. ಆದರೆ, ಹಾಕಿದ ಬಂಡವಾಳವೂ ಕೈಸೇರದಂತೆ ಆಗಿದೆ.
ಈಚೆಗೆ ಅಲ್ಪಾವಧಿ ಬೆಳೆಗಳಾದ ಕೋಸು, ಸಣ್ಣಈರುಳ್ಳಿ, ಗುಂಡು ಬದನೆ, ಅವರೆ ಬೆಳೆದು ಪಟ್ಟಣದ ಸಂತೆಯಲ್ಲಿ ಮಾರಲಾಗುತ್ತದೆ. ಕಿಲೋಗೆ ರೂ.10 ರಿಂದ 20ರ ತನಕ ಬೆಲೆ ಸಿಗುತ್ತದೆ. 

ತಾಲ್ಲೂಕಿನಲ್ಲಿ ಒಟ್ಟು ಬೆಳೆ ವಿಸ್ತೀರ್ಣ 10620 ಹೆಕ್ಟೇರ್ ಪ್ರದೇಶದಲ್ಲಿದೆ. ನೀರಾವರಿ ಭೂಮಿ  8 ಸಾವಿರ  ಹೆಕ್ಟೇರ್ ಪ್ರದೇಶದಲ್ಲಿದೆ. ಏಕದಳ ಹಾಗೂ ತೃಣ ಧಾನ್ಯಗಳನ್ನು 5776 ಹೆಕ್ಟೇರ್‌ಗಳಲ್ಲಿ ಬೆಳೆಯಲಾ ಗುತ್ತದೆ.  ಹಣ್ಣಿನ ಬೆಳೆಗೆ 63 ಹೆಕ್ಟೇರ್ ಪ್ರದೇಶವಿದೆ. ಆದರೆ, ತರಕಾರಿ ಬೇಸಾಯ ಕೇವಲ 47  ಹೆಕ್ಟೇರ್‌ಗಷ್ಟೇ ಮಿತಿಗೊಂಡಿದೆ.

ಬೆಳೆಗೆ ರೋಗದ ಭೀತಿ, ವೈಜ್ಞಾನಿಕ ನಿರ್ವಹಣೆಯ ಕೊರತೆ, ಬದಲಾದ ಋತುಮಾನದಲ್ಲಿ ಬದಲಾ ಗದ ಬೆಳೆ  ವೈವಿಧ್ಯತೆ ಇವೇ ಮೊದ ಲಾದ ಸಮಸ್ಯೆ ರೈತರನ್ನು ಕಾಡಿದೆ.

`ಇಲ್ಲಿ ಬೆಳೆದಿರುವ ತಳಿಯ ಬಗ್ಗೆಯೂ ತಿಳಿದಿಲ್ಲ. ಬೆಳೆ ರೋಗ ಪೀಡಿತವಾಗಿ ಇರುವುದರಿಂದ ಕೀಳಲಾ ಗುತ್ತಿಲ್ಲ. ಉಳಿದವನ್ನು ಕೊಳ್ಳಲೂ ಯಾರು ಆಸಕ್ತಿ ತೋರುವುದಿಲ್ಲ. ಬದಲಾದ ಹವಾಮಾನದಲ್ಲಿ ಇವುಗಳ ಸಂರಕ್ಷಣೆ ಮಾಡಲೂ ತಿಳಿದಿಲ್ಲ. ಹೆಚ್ಚು ಕೀಟನಾಶಕ ಬಳಸಲೂ ಆಸಕ್ತಿ ಇಲ್ಲ. ಇದರಿಂದ ತರಕಾರಿ ಬೆಳೆದರೂ ಹಣ ಕೈ ಸೇರದಂತೆ ಆಗಿದೆ' ಎನ್ನುತ್ತಾರೆ ಯರಿಯೂರಿನ ನಾಗೇಂದ್ರ ಹಾಗೂ ಇತರ ತರಕಾರಿ ಬೆಳೆಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.