ADVERTISEMENT

ಡೆಂಗಿ ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಮುಖ್ಯ

ಅರಿವು ಕಾರ್ಯಾಗಾರದಲ್ಲಿ ಡಿಎಚ್‌ಒ ಡಾ.ಕೆ.ಎಚ್.ಪ್ರಸಾದ್ ಕರೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:27 IST
Last Updated 1 ಜೂನ್ 2018, 12:27 IST

ಚಾಮರಾಜನಗರ: ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗಿ ಜ್ವರವನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಲು ಜನರ ಸಹಭಾಗಿತ್ವ ಅತ್ಯಂತ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದ ವತಿಯಿಂದ ನಡೆದ ರಾಷ್ಟ್ರೀಯ ಡೆಂಗಿ ದಿನಾಚರಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಈಡಿಸ್‌ ಈಜಿಪ್ಟೈ’ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಡೆಂಗಿ ಜ್ವರ ಹರಡುವ ರೋಗವಾಹಕವಾಗಿದೆ. ಸ್ವಚ್ಛ ನೀರಿನಲ್ಲಿ ಸಂತಾನ ಅಭಿವೃದ್ಧಿ ಮಾಡುವ ಈ ಸೊಳ್ಳೆಗಳು ಹಗಲು ವೇಳೆಯಲ್ಲಿ ಮಾತ್ರ ವ್ಯಕ್ತಿಯನ್ನು ಕಚ್ಚಿ ರೋಗ ಹರಡುವಲ್ಲಿ ಕ್ರಿಯಾಶೀಲವಾಗುತ್ತವೆ. ಈ ಕುರಿತು ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಹೇಳಿದರು.

ADVERTISEMENT

ಡೆಂಗಿ ಬಗ್ಗೆ ವಿವರಗಳನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ್‍ಕುಮಾರ್, ‘ಮಳೆಗಾಲದಲ್ಲಿ ಹೆಚ್ಚು ಕ್ರಿಯಾಶೀಲವಾಗುವ ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಹಳೆ ವಸ್ತುಗಳಾದ ಮಡಿಕೆ, ಡ್ರಮ್, ಬ್ಯಾರಲ್, ಉಪಯೋಗಿಸಿದ ಒರಳುಕಲ್ಲು ಹಾಗೂ ಹಳೆಯ ಟೈರುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ ಎಂದರು.

ಆರ್‌ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜು, ಕಾರ್ಯಾಗಾರದಲ್ಲಿ ಹಾಜರಿದ್ದರು.

ಜಾಗೃತಿ ಜಾಥಾ

ಡೆಂಗಿ ತಡೆಯುವಿಕೆಗಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಅರಿವು ಜಾಥಾಗಳನ್ನು ಏರ್ಪಡಿಸುವುದರ ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತೀ ತಿಂಗಳ ಮೊದಲ ಹಾಗೂ 3ನೇ ಶುಕ್ರವಾರ ಮನೆಮನೆಗೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ನೀಡಲಿದ್ದಾರೆ. ಡೆಂಗಿ ಜ್ವರದ ಸಮರ್ಪಕ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ 33 ಪ್ರಯೋಗಾಲಯ ತೆರೆಯಲಾಗಿದೆ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿಯೂ ಪ್ರಯೋಗಾಲಯ ಆರಂಭಿಸ ಲಾಗಿದೆ ಎಂದು ಡಾ.ಅನಿಲ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.