ADVERTISEMENT

ತಳ್ಳುಗಾಡಿಗಳಿಂದ ಜನರ ಓಡಾಟ ದುಸ್ತರ

ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ಖಾಲಿ ಇದ್ದರೂ ಹೋಗುವವರು ಇಲ್ಲ

ಸೂರ್ಯನಾರಾಯಣ ವಿ
Published 5 ಜೂನ್ 2018, 13:12 IST
Last Updated 5 ಜೂನ್ 2018, 13:12 IST
ತಳ್ಳುಗಾಡಿಗಳಲ್ಲಿ ತರಕಾರಿ ಮಾರುತ್ತಿರುವುದು
ತಳ್ಳುಗಾಡಿಗಳಲ್ಲಿ ತರಕಾರಿ ಮಾರುತ್ತಿರುವುದು   

ಚಾಮರಾಜನಗರ: ಪಟ್ಟಣದ ನಗರಸಭೆ ಕಚೇರಿ ಸಮೀಪ ಹೊಸದಾಗಿ ನಿರ್ಮಿಸಲಾಗಿರುವ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಗಳು ತ‌ಳ್ಳುಗಾಡಿಗಳಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ.‌

ಅನಿವಾರ್ಯವಾಗಿ ಜನರು ರಸ್ತೆಯಲ್ಲಿ ಸಂಚರಿಸಬೇಕಾಗಿರುವುದರಿಂದ ಅಲ್ಲಿ ದಟ್ಟಣೆ ಹೆಚ್ಚಾಗಿ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟ ಮಾಡುತ್ತಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆರು ತಿಂಗಳಿನಿಂದ ಸಮಸ್ಯೆ:  ‘ಮೊದಲು ಈ ರೀತಿ ಇರಲಿಲ್ಲ. ಆರು ತಿಂಗಳ ಹಿಂದೆ ರಸ್ತೆ ಅಗಲೀಕರಣಕೊಂಡು ಚರಂಡಿ ಮೇಲೆ ಕಾಂಕ್ರೀಟ್‌ ಹಾಕಿ ಪಾದಚಾರಿ ಮಾರ್ಗ ನಿರ್ಮಿಸಿದ ನಂತರ ತರಕಾರಿ ಮಾರಾಟ ಮಾಡಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅವರು ಕೂಡ ಹೊಟ್ಟೆ ಹೊರೆದುಕೊಳ್ಳಲು ವ್ಯಾಪಾರ ಮಾಡುತ್ತಾರೆ. ಸ್ಥಳೀಯ ಆಡಳಿತ ಅವರಿಗೆ ಬೇರೆ ಕಡೆ ಜಾಗ ತೋರಿಸ ಬೇಕು’ ಎಂದು ಅವರು ಹೇಳಿದರು.‌

ಮಾರುಕಟ್ಟೆ ಖಾಲಿ ಖಾಲಿ: ಅಲ್ಲೇ ಸಮೀಪದಲ್ಲಿ ಅಧಿಕೃತವಾದ ತರಕಾರಿ ಮಾರುಕಟ್ಟೆ ಇದೆ. ಅಲ್ಲಿ 70ಕ್ಕೂ ಹೆಚ್ಚು ಅಂಗಡಿಗಳು ಖಾಲಿ ಇವೆ. ತಳ್ಳುಗಾಡಿ ಮಾರಾಟಗಾರರಿಗೆ ಅಲ್ಲಿ ಹೋಗಿ ವ್ಯಾಪಾರ ಮಾಡುವುದಕ್ಕೆ ಅವಕಾಶ ಇದೆ.‌

‘ನಾವಿಲ್ಲಿ ಹಲವು ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿರುವವರು. ಬಾಡಿಗೆಯನ್ನೂ ಕಟ್ಟುತ್ತಾ ಇದ್ದೇವೆ. ಆದರೆ, ಈಗ ನಮಗೆ ಇಲ್ಲಿ ವ್ಯಾ‍ಪಾರ ಆಗುತ್ತಿಲ್ಲ. ಜನರು ಅಲ್ಲೇ ತಳ್ಳುಗಾಡಿಗಳಿಂದ ತರಕಾರಿ ಖರೀದಿಸುತ್ತಾರೆಯೇ ವಿನಾ ಇಲ್ಲಿಗೆ ಬರುತ್ತಿಲ್ಲ’ ಎಂದು ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿರುವ ರಘು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ 70ರಿಂದ 80 ಅಂಗಡಿಗಳು ಖಾಲಿ ಇವೆ. ಅಲ್ಲಿರುವವರು ಇಲ್ಲಿಗೆ ಬರಲಿ. ನಗರಸಭೆಗೆ ಬಾಡಿಗೆಯೂ ಬರುತ್ತದೆ.  ದಟ್ಟಣೆಯಿಂದ ಜನರಿಗಾಗುವ ತೊಂದರೆಯೂ ತಪ್ಪುತ್ತದೆ’ ಎಂದು ಹೇಳುತ್ತಾರೆ ಅವರು.‌

‘ಈ ಬಗ್ಗೆ ನಗರಸಭೆಗೆ ದೂರನ್ನೂ ನೀಡಿದ್ದೇವೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಳಲು ತೋಡಿಕೊಂಡರು.

‌‘ಇಲ್ಲಿ ವ್ಯಾಪಾರ ಆಗದೇ ಇರುವುದರಿಂದ ಮಾರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ಕೆಲವರು ನಗರ ಸಭೆಯ ಮುಂದೆ ತಳ್ಳುಗಾಡಿಗಳನ್ನು ಅನಿವಾರ್ಯವಾಗಿ ಇಟ್ಟಿದ್ದಾರೆ’ ಎಂದು ಮತ್ತೊಬ್ಬ ವ್ಯಾಪಾರಿ ತಿಳಿಸಿದರು.

‘ಪ್ರತ್ಯೇಕ ಮಾರುಕಟ್ಟೆ ಇರುವಾಗ ನಗರಸಭೆಯ ಮುಂದೆ ತರಕಾರಿ ಮಾರಾಟ ಮಾಡುವುದು ಸರಿಯಲ್ಲ. ಸ್ಥಳೀಯ ಆಡಳಿತ ಇದಕ್ಕೆ ಅವಕಾಶ ಕೊಡಬಾರದು’ ಎಂದು ಹೇಳುತ್ತಾರೆ ನಗರಸಭೆಯ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಸಿ.ಎಸ್‌. ಮಹದೇವ ನಾಯಕ.

‌‘ಯಾರೂ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಪಾದಚಾರಿ ಮಾರ್ಗದಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಸಮಸ್ಯೆಗಳೇ ಹೆಚ್ಚು. ಜಿಲ್ಲಾಧಿಕಾರಿ ಹಾಗೂ ಶಾಸಕರು ತಕ್ಷಣ ಈ ಬಗ್ಗೆ ಗಮನ ಹರಿಸಿ, ಗಾಡಿಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.‌

ತೆರವುಗೊಳಿಸಬೇಕಾದವರು ಯಾರು?

ಆಗುತ್ತಿರುವ ಸಮಸ್ಯೆಯನ್ನು ಸ್ಥಳೀಯರು ಮತ್ತು ಸುತ್ತಮುತ್ತಲಿನ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ಹಲವು ಬಾರಿ ತಂದಿದ್ದಾರೆ. ಆದರೆ, ಗಾಡಿಗಳನ್ನು ತೆರವುಗೊಳಿಸಲು ಯಾರೂ ಮುಂದಾಗಿಲ್ಲ.‌ ಪೊಲೀಸರ ಬಳಿ ಹೇಳಿದರೆ, ಅದು ಸಂಚಾರ ವಿಭಾಗದ ಪೊಲೀಸರಿಗೆ ಬರುತ್ತದೆ ಎಂದು ಹೇಳುತ್ತಾರೆ. ಸಂಚಾರ ಪೊಲೀಸರರನ್ನು ಕೇಳಿದರೆ, ನಗರಸಭೆಯವರೇ ಗಾಡಿಗಳನ್ನು ತೆರವುಗೊಳಿಸಬೇಕು ಎಂದು ಹೇಳುತ್ತಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

**
ರಸ್ತೆ ನಿರ್ಮಾಣ ಕಾಮಗಾರಿ ಎಲ್ಲ ಪೂರ್ಣಗೊಂಡ ಮೇಲೆ, ಈ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ
– ಸತ್ಯಮೂರ್ತಿ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.