ADVERTISEMENT

ತಾ.ಪಂ: ಅಧ್ಯಕ್ಷೆ ಪದ್ಮಾ , ಉಪಾಧ್ಯಕ್ಷಮಹಾಲಿಂಗಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 6:25 IST
Last Updated 25 ಫೆಬ್ರುವರಿ 2011, 6:25 IST

ಚಾಮರಾಜನಗರ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಹೊಂಗನೂರು ಕ್ಷೇತ್ರದ ಪದ್ಮಾ ಚಂದ್ರು ಮತ್ತು ಉಪಾಧ್ಯಕ್ಷರಾಗಿ ಮಂಗಲ ಕ್ಷೇತ್ರದ ಪಿ. ಮಹಾಲಿಂಗಸ್ವಾಮಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ(ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ-‘ಅ’ ವರ್ಗಕ್ಕೆ ಮೀಸಲಾಗಿತ್ತು. ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ. ಒಟ್ಟು 28 ಸ್ಥಾನಗಳಿದ್ದು, ಕಾಂಗ್ರೆಸ್- 15, ಬಿಜೆಪಿ- 12 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಯಾರೊಬ್ಬರು ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ, ಅವಿರೋಧ ಆಯ್ಕೆ ಘೋಷಿಸಲಾಯಿತು. 27 ಸದಸ್ಯರು ಮಾತ್ರವೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹರವೆ ಕ್ಷೇತ್ರದ ಸದಸ್ಯೆ ಪ್ರೇಮಾ ಗೈರುಹಾಜರಾಗಿದ್ದರು. ಕೇವಲ ಅರ್ಧಗಂಟೆ ಅವಧಿಯಲ್ಲೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು. ತಾಲ್ಲೂಕು ಪಂಚಾಯಿತಿಯಲ್ಲಿ ಪರಿಶಿಷ್ಟ ಪಂಗಡ(ಮಹಿಳೆ)ಕ್ಕೆ ಮೀಸಲಾದ ಎರಡು ಕ್ಷೇತ್ರಗಳಿವೆ. ಈ ಎರಡಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ.

ಪುಣಜನೂರು ಕ್ಷೇತ್ರದ ಸೋಲಿಗ ಮಹಿಳೆ ಮಹಾದೇವಿ ಅವರಿಗೆ ಕಾಂಗ್ರೆಸ್ ಜಿಲ್ಲಾ ವರಿಷ್ಠರು ಮಣೆ ಹಾಕಿಲ್ಲ. ಇದರಿಂದ ಸೋಲಿಗ ಮಹಿಳೆ ಅಧ್ಯಕ್ಷ ಗಾದಿಗೆ ಏರುವ ಅವಕಾಶ ಕೈತಪ್ಪಿತು.
ಉಪಾಧ್ಯಕ್ಷ ಸ್ಥಾನಕ್ಕೂ ಮೂವರು ಆಕಾಂಕ್ಷಿಗಳಿದ್ದರು. ಅವರಲ್ಲಿ ಮಹಾಲಿಂಗಸ್ವಾಮಿ ವರಿಷ್ಠರ ವಿಶ್ವಾಸಗಳಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಳ್ಳುತ್ತಿದ್ದಂತೆ ತಾ.ಪಂ. ಕಚೇರಿ ಮುಂಭಾಗ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಕೃಷ್ಣರಾಜು   ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.ನಂತರ ಪದ್ಮಾ ಹಾಗೂ ಮಹಾಲಿಂಗಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರು, ಶಾಸಕರು, ಸಂಸದರು ನಮ್ಮ ಆಯ್ಕೆಗೆ ಸಹಕರಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.