ADVERTISEMENT

ತೆವಳುತ್ತಲೇ ಇರುವ ಹಾಪ್‌ಕಾಮ್ಸ್‌

ಚಾಮರಾಜನಗರದಲ್ಲಿ ಒಂದೇ ಮಳಿಗೆ, ರೈತರಿಂದ ಖರೀದಿಯೇ ಇಲ್ಲ

ಕೆ.ಎಸ್.ಗಿರೀಶ್
Published 20 ಮೇ 2018, 14:27 IST
Last Updated 20 ಮೇ 2018, 14:27 IST
ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಆರಂಭಗೊಳ್ಳದ ಹಾಪ್‌ಕಾಮ್ಸ್ ಮಳಿಗೆ
ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಆರಂಭಗೊಳ್ಳದ ಹಾಪ್‌ಕಾಮ್ಸ್ ಮಳಿಗೆ   

ಚಾಮರಾಜನಗರ: ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ (ಹಾಪ್‌ಕಾಮ್ಸ್) ಇನ್ನೂ ತೆವಳುತ್ತಲೇ ಸಾಗುತ್ತಿದೆ. ಇಡೀ ಜಿಲ್ಲೆಯಲ್ಲಿ 892 ಮಂದಿ ತೋಟದ ಬೆಳೆಗಾರರು ಸದಸ್ಯರಾಗಿದ್ದರೂ ಕೇವಲ 4 ಮಾರಾಟ ಮಳಿಗೆಗಳಷ್ಟೇ ಕಾರ್ಯನಿರ್ವಹಿಸುತ್ತಿವೆ.

ಚಾಮರಾಜನಗರ ನ್ಯಾಯಾಲಯದ ರಸ್ತೆಯಲ್ಲಿ, ಜಿಲ್ಲಾಡಳಿತ ಭವನದ ಬಳಿ, ಕಲ್ಯಾಣಿ ಬಳಿ ಹಾಗೂ ಮಲೆಮಹದೇಶ್ವರ ಬೆಟ್ಟದಲ್ಲಿ ಮಾತ್ರ ಮಾರಾಟ ಮಳಿಗೆಗಳು ಇವೆ. ಜಿಲ್ಲಾಸ್ಪತ್ರೆ ಬಳಿ ಇರುವ ಮಾರಾಟ ಮಳಿಗೆ ನೋಡಲು ಸುಂದರವಾಗಿದ್ದರೂ ಅದಿನ್ನೂ ಉದ್ಘಾಟನೆಗೊಂಡಿಲ್ಲ.

ಆರಂಭದಲ್ಲಿ ಮೈಸೂರಿನೊಂದಿಗೆ ಇದ್ದ ಹಾಪ್‌ಕಾಮ್ಸ್‌ ಚಾಮರಾಜನಗರ ಜಿಲ್ಲೆಯಾದ ನಂತರ ಪ್ರತ್ಯೇಕಗೊಂಡಿತು. ಆದರೆ, ಮೈಸೂರಿಗೆ ಹೋಲಿಸಿದರೆ ಶೇ 1ರಷ್ಟೂ ಇದು ಚುರುಕಾಗಿಲ್ಲ.

ADVERTISEMENT

ಮೂಲಸೌಕರ್ಯ ಕೊರತೆಯಿಂದ ಜಿಲ್ಲೆಯ ಹಾಪ್‌ಕಾಮ್ಸ್ ಬಳಲುತ್ತಿದೆ. ಇದಕ್ಕೊಂದು ಸ್ವಂತ ಕಟ್ಟಡ ಎಂಬುದಿಲ್ಲ. ನಗರದ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡದ ಕಚೇರಿಯನ್ನೇ ತಾತ್ಕಾಲಿಕವಾಗಿ ನೀಡಲಾಗಿದೆ. ಈಗ ಇಲ್ಲಿ ಬಸ್‌ನಿಲ್ದಾಣ ಸ್ಥಾಪಿಸುವ ಪ್ರಸ್ತಾವ ಇರುವುದರಿಂದ ಇಲ್ಲಿಂದಲೂ ಹಾಪ್‌ಕಾಮ್ಸ್‌ ಕಾಲ್ತೆಗೆಯಬೇಕಿದೆ.

ಕಾಳನಹುಂಡಿ ಸಮೀಪ ಹಾಪ್‌ ಕಾಮ್ಸ್‌ಗೆಂದೇ ನಿವೇಶನ ನೀಡಲಾಗಿದೆ. ಆದರೆ, ಇದು ನಗರದಿಂದ ದೂರ ಇರುವುದರಿಂದ ತೋಟದ ಬೆಳೆಗಾರರಿಗೆ ಅನುಕೂಲವಾಗುವುದಿಲ್ಲ. ಹೀಗಾಗಿ, ಇಲ್ಲಿ ಕಟ್ಟಡ ಕಟ್ಟುವ ಕೆಲಸಕ್ಕೆ ಹಾಪ್‌ಕಾಮ್ಸ್ ಕೈ ಹಾಕಿಲ್ಲ.

ಸದ್ಯ, 892 ಮಂದಿ ಸದಸ್ಯರು ಇದರಲ್ಲಿ ಇದ್ದಾರೆ. ಇರುವ ಖಾಯಂ ಸಿಬ್ಬಂದಿ ಸಂಖ್ಯೆ ಮಾತ್ರ ಕೇವಲ 1. ಇದರ ವ್ಯವಸ್ಥಾಪಕ ನಿರ್ದೇಶಕರೂ ಪ್ರಭಾರಿಗಳೇ ಆಗಿದ್ದಾರೆ. ಕಾರ್ಯದರ್ಶಿಯೊಬ್ಬರೇ ಎಲ್ಲವನ್ನೂ ನೋಡಿಕೊಳ್ಳಬೇಕಿದೆ. ಸಿಬ್ಬಂದಿ ಕೊರತೆಯಿಂದ ಹಾಪ್‌ಕಾಮ್ಸ್‌ ಮುನ್ನಡೆಯಲು ಆಗುತ್ತಿಲ್ಲ.

ಜಿಲ್ಲೆಯಲ್ಲಿ 10,590 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಟೊಮೆಟೊ, ಬಾಳೆ, ಮಾವು ಸೇರಿದಂತೆ ಅನೇಕ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸ್ವಲ್ಪ ಶ್ರಮ ವಹಿಸಿದರೂ ಹಾಪ್‌ಕಾಮ್ಸ್‌ಅನ್ನು ಹೆಚ್ಚು ಬಲಗೊಳಿಸುವ ಅವಕಾಶ ಇದೆ. ಆದರೆ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗಿಲ್ಲ.

ಫೆಬ್ರುವರಿಯಿಂದ ಉದ್ಘಾಟನೆಗೊಳ್ಳದ ಮಳಿಗೆ: ಇಲ್ಲಿನ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಹಾಪ್‌ಕಾಮ್ಸ್ ಮಾರಾಟ ಮಳಿಗೆ ಫೆಬ್ರುವರಿಯಲ್ಲಿ ಪೂರ್ಣ ಗೊಂಡಿದೆ. ಆದರೂ, ಇಲ್ಲಿಯವರೆಗೆ ಉದ್ಘಾಟನೆಗೊಂಡಿಲ್ಲ. ಇದರ ಮುಂದೆ ದಪ್ಪ ಅಕ್ಷರಗಳಲ್ಲಿ ಹಾಪ್‌ಕಾಮ್ಸ್‌ ಎಂದು ಬರೆದಿದೆ. ಇದೊಂದೆ ಇಲ್ಲಿಯವರೆಗೆ ಆಗಿರುವ ಸಾಧನೆ ಇದೊಂದೇ.

ಹಾಪ್‌ಕಾಮ್ಸ್‌ ಏಕೆ ಬೇಕು?

ತೋಟದ ಬೆಳೆಗಾರರು ಸಾಮಾನ್ಯವಾಗಿ ಮಧ್ಯವರ್ತಿಗಳ ಮೇಲೆ ಹೆಚ್ಚಾಗಿ ಅವಲಂಬನೆ ಆಗಿರುತ್ತಾರೆ. ಮಧ್ಯವರ್ತಿಗಳು ತೋಟದಲ್ಲೇ ಹಣ್ಣು, ತರಕಾರಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ದರಕ್ಕೆ ನಗರದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಬಹಳಷ್ಟು ತೋಟಗಾರಿಕಾ ಬೆಳೆಗಳಿಗೆ ಇಬ್ಬರಿಂದ ಮೂವರವರೆಗೆ ಮಧ್ಯವರ್ತಿಗಳು ಇದ್ದಾರೆ. ಇದರಿಂದ ಲಾಭವೆಲ್ಲವೂ ಮಧ್ಯವರ್ತಿಗಳ ಪಾಲಾಗುತ್ತದೆ. ಬೆಳೆಗಾರನಿಗೆ ಕನಿಷ್ಠ ಲಾಭವೂ ಸಿಗುವುದಿಲ್ಲ. ಮಧ್ಯವರ್ತಿಗಳ ನಿರ್ಮೂಲನೆಗಾಗಿ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ– ಹಾಪ್‌ಕಾಮ್ಸ್ ಹುಟ್ಟಿಕೊಂಡಿತು.

ಇದು ಮಾರುಕಟ್ಟೆಯ ಬೆಲೆಗಿಂತ ಸ್ವಲ್ಪ ಕಡಿಮೆ ದರಕ್ಕೆ ನೇರವಾಗಿ ಬೆಳೆಗಾರರಿಂದ ಖರೀದಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಇದರಿಂದ ಬೆಳೆಗಾರರಿಗೆ ಅಧಿಕ ಲಾಭ ದೊರೆಯುತ್ತದೆ. ಗ್ರಾಹಕರಿಗೂ ಉತ್ತಮ ಗುಣಮಟ್ಟದ ತರಕಾರಿ, ಹಣ್ಣುಗಳು ಸಿಗುತ್ತವೆ. ಹೀಗಾಗಿ, ಹಾಪ್‌ಕಾಮ್ಸ್‌ನ ಪಾತ್ರ ತೋಟಗಾರಿಕಾ ದೃಷ್ಟಿಯಿಂದ ಅತ್ಯಂತ ಮಹತ್ವದ್ದು.

**
ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆಯ ಮಧ್ಯೆ ಹಾಪ್‌ಕಾಮ್ಸ್‌ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಮಾರಾಟ ಮಳಿಗೆ ಪ್ರಾರಂಭಿಸಲಾಗುವುದು
ಕೇಶವ್, ಹಾ‍ಪ್‌ಕಾಮ್ಸ್‌ನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.