ADVERTISEMENT

ದೇಶವಳ್ಳಿಗೆ ಬೆಳಕು ತರದ ದೀಪಾವಳಿ!

ಪ್ರಜಾವಾಣಿ ವಿಶೇಷ
Published 15 ನವೆಂಬರ್ 2012, 9:40 IST
Last Updated 15 ನವೆಂಬರ್ 2012, 9:40 IST

ಸಂತೇಮರಹಳ್ಳಿ: ದೀಪಾವಳಿ ಹಬ್ಬದ 3 ದಿನ ಇಲ್ಲಿನವರು ಸ್ನಾನ ಮಾಡುವುದಿಲ್ಲ. ಬಟ್ಟೆ ತೊಳೆಯುವುದಿಲ್ಲ. ಮನೆ ತೊಳೆಯುವುದಿಲ್ಲ. ಒಗ್ಗರಣೆಯ ಅಡುಗೆಯನ್ನೂ ಮಾಡುವುದಿಲ್ಲ...

ದೇಶದಾದ್ಯಂತ ಜನರು ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಈ ಗ್ರಾಮಸ್ಥರು ಮಾತ್ರ ಕತ್ತಲೆಯಲ್ಲಿ ಮುಳುಗಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೇ ಅಪಾಯ ಕಟ್ಟಿಟ್ಟಬುತ್ತಿ ಎಂಬ ನಂಬಿಕೆ ಈ ಜನರಲ್ಲಿದೆ.

ಹೌದು, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಸಂತೇಮರಹಳ್ಳಿ ಸಮೀಪದ ದೇಶವಳ್ಳಿ ಗ್ರಾಮದಲ್ಲಿ ಇಂಥದ್ದೊಂದು ವಿಚಿತ್ರವಾದ ಕಟ್ಟುನಿಟ್ಟಿನ ಆಚರಣೆ ಜಾರಿಯಲ್ಲಿದೆ. 

ಗ್ರಾಮ ದೇವತೆ ಸತ್ಯವತಿ ಮಾರಮ್ಮ. ಅಮ್ಮನ ಭಕ್ತರು ಈ ನಿಬಂಧನೆಗೆ ಒಳಪಟ್ಟಿದ್ದಾರೆ. ಇಲ್ಲಿ 150 ಕುಟುಂಬಗಳಿವೆ. ಪರಿಶಿಷ್ಟರು, ವೀರಶೈವರು, ಕುರುಬರು, ನಾಯಕರು, ನಯನಜ ಕ್ಷತ್ರಿಯರು ಇದ್ದಾರೆ. ಸತ್ಯವತಿ ಮಾರಮ್ಮನ ಒಕ್ಕಲಿನವರು ಬಹುತೇಕರು ಪರಿಶಿಷ್ಟರ ಬೀದಿಯಲಿದ್ದಾರೆ.

ಗ್ರಾಮದಲ್ಲಿ ತಲೆ ತಲಾಂತರದಿಂದಲೂ ಈ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಈ ಪದ್ಧತಿ ಮೀರಿ ನಡೆದರೇ ಏನಾದರೂ ಅಪಾಯವಾಗುತ್ತದೆ ಎಂಬ ಭೀತಿಯಿಂದ ಗ್ರಾಮಸ್ಥರು ಈ ನಿಯಮವನ್ನು ಇಂದಿಗೂ ಉಲ್ಲಂಘಿಸಿಲ್ಲ.

ಹಿಂದಿನ ಕಾಲದಲ್ಲಿ ಈ ಒಕ್ಕಲಿನವರು ಹಬ್ಬದ ಸಮಯದಲ್ಲಿ ಮೊದಲಿಗೆ ಮಕ್ಕಳಿಗೆ ಸ್ನಾನ ಮಾಡಿಸಿ, ತೊಟ್ಟಿಲಲ್ಲಿ ಮಲಗಿಸುತ್ತಿದ್ದರು. ಮನೆಯಿಂದ ಹೊರಗಡೆ ಹೋಗಿ ನೀರು ತರುವಷ್ಟರಲ್ಲಿ ಮಲಗಿದ್ದ ಮಗುವಿನ ತೊಟ್ಟಿಲ ಹಗ್ಗ ಹರಿದು, ಮಕ್ಕಳಿಗೆ ಅಪಾಯವಾಗುತ್ತಿತ್ತು, ಒಗ್ಗರಣೆಗೆ ತಯಾರು ಮಾಡಿದ ಆಹಾರಗಳಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದವು. ಅಂದಿನಿಂದ ಈ ಹಬ್ಬವನ್ನು ಆಚರಿಸುವುದನ್ನು ನಿಲ್ಲಿಸಲಾಯಿತು ಎನ್ನುತ್ತಾರೆ ಗ್ರಾಮದ ಸಿದ್ದಮ್ಮ.

ಗ್ರಾಮ ದೇವತೆಯಿಂದ ದೀಪಾವಳಿ ಹಬ್ಬಕ್ಕೆ ಇರುವ ಕಟ್ಟುಪಾಡು ಏನು ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ದೀಪಾವಳಿಯ ಹಿಂದಿನ ದಿವಸ ಗ್ರಾಮದಿಂದ ಕೆಲವರು ಮಹದೇಶ್ವರ ಬೆಟ್ಟಕ್ಕೆ ಹೋಗಿರುತ್ತಾರೆ. ಅವರು ಗ್ರಾಮಕ್ಕೆ ಮರಳಿದಾಗ ಅವರನ್ನು ನೋಡಿದ ನಂತರವಷ್ಟೇ ಗ್ರಾಮಸ್ಥರು ಮನೆ ತೊಳೆದು, ಸ್ನಾನ ಮಾಡುವುದು ವಾಡಿಕೆಯಾಗಿದೆ. ಆದರೆ ಯುಗಾದಿ ಹಬ್ಬದ ಸಮಯದಲ್ಲಿ ಗ್ರಾಮ ದೇವತೆಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಲವು ತಾಲ್ಲೂಕುಗಳಿಂದಲೂ ಹರಕೆ ಹೊತ್ತು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ಗ್ರಾಮದ ಹೊರ ಭಾಗದಲ್ಲಿರುವ ಸತ್ಯವತಿ ಮಾರಮ್ಮ ದೇವಿಯ ವಿಗ್ರಹಕ್ಕೆ ಯಾವುದೇ ಗುಡಿ, ಗೋಪುರಗಳಿಲ್ಲ. ಅನಾದಿ ಕಾಲದಿಂದಲೂ ಬಿಸಿಲು, ಮಳೆ, ಗಾಳಿಗೆ ಸಣ್ಣ ಕಲ್ಲುಗಳು ಸಹ ಶಿಥಿಲವಾಗದೇ ಉಳಿದಿರುವುದು ದೇವಿಯ ಮಹಿಮೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.