ADVERTISEMENT

ಧಾರಾಕಾರ ಮಳೆ: ಮನೆಗೆ ನುಗ್ಗಿದ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:45 IST
Last Updated 16 ಅಕ್ಟೋಬರ್ 2012, 5:45 IST

ಕೊಳ್ಳೇಗಾಲ:  ಕಲುಷಿತ ನೀರು ಮನೆಗಳಿಗೆ ನುಗ್ಗಿದ ಪರಿಣಾಮ  ಜನರು ತೊಂದರೆಗೆ ಸಿಲುಕಿರುವ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಚರಂಡಿಯ ಕಲುಷಿತ ನೀರು ಬೀದಿ ಮತ್ತು ಮನೆಗಳಿಗೆ ನುಗ್ಗಿ ದುರ್ನಾತ ಬೀರತೊಡಗಿ ಜನರು ಬೀದಿಯಲ್ಲಿ ಓಡಾಡದಂತಾಗಿದೆ. ಕೆಲವು ದಿನಗಳ ಹಿಂದೆ ಬಿದ್ದ ಮಳೆಯಿಂದ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಮತ್ತೆ ಈ ಬೀದಿ ಜಲಾವೃತಗೊಂಡು ಕಲುಷಿತ ನೀರು ಮನೆಗಳಿಗೆ ನುಗ್ಗಿದೆ. ಹಲವಾರು ಮನೆಗಳು ಕುಸಿಯುವ ಹಂತ ತಲುಪಿದೆ.

`ಮಧುವನಹಳ್ಳಿ ಮಧ್ಯಭಾಗದಲ್ಲಿ 15ನೇ ತೂಬಿನಿಂದ ಮಳೆಗಾಲದಲ್ಲಿ ನೀರು ಹರಿದುಹೋ ಗುತ್ತದೆ. ಈ ಚರಂಡಿ ದೊಡ್ಡದು. ಇದರ ಮೇಲೆ ಮನಬಂದಂತೆ ಚಪ್ಪಡಿ ಹಾಕಿ ತಮಗೆ ಇಷ್ಟ ಬಂದಂತೆ ಗೋಡೆ ನಿರ್ಮಿಸಿಕೊಂಡಿರುವುದೇ ನೀರು ಸರಾಗವಾಗಿ ಹೊರಗೆ ಹೊಗದಿರಲು ಕಾರಣ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಕೈಗೊಂಡು ನೀರು ಸರಾಗವಾಗಿ ಹೊರಹೋಗುವಂತೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪುಟ್ಟಬಸವಶೆಟ್ಟಿ ಒತ್ತಾಯಿಸಿದರು.

ಕಲುಷಿತ ನೀರು ಹರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಸಾರ್ವಜನಿಕರನ್ನು ಕಾಡುತ್ತಿದ್ದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಇಲ್ಲಿಗೆ ಭೇಟಿನೀಡಿ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಮನೆಗೆ ನುಗ್ಗಿದ ನೀರು: ತೂಬು ಒಡೆದು ಮನೆಗಳಿಗೆ ನೀರುನುಗ್ಗಿರುವ ಘಟನೆ ತಾಲ್ಲೂಕಿನ ಮಧುವನಹಳ್ಳಿ ಜಿ.ವಿ.ಗೌಡ ನಗರದಲ್ಲಿ ಸೋಮವಾರ ನಡೆದಿದೆ.

ಕಬಿನಿ ನೀರುಹರಿಯುವ ಕಾಲುವೆಯ 16ನೇ ತೂಬು ಭಾನುವಾರ ಸುರಿದ ಧಾರಾಕಾರ ಮಳೆಯ ಪರಿಣಾಮ ಒಡೆದಿದೆ. ಇದರಿಂದ ಜಿ.ವಿ.ಗೌಡ ನಗರದ ಮನೆಗಳಿಗೆ ಮತ್ತು ಬಿದಿಗೆ ನುಗ್ಗಿದೆ.

ಅನಿರೀಕ್ಷಿತವಾಗಿ ನುಗ್ಗಿದ ನೀರಿನಿಂದ ಮನೆಯಲ್ಲಿದ್ದ ದವಸ-ಧಾನ್ಯಗಳು ಸೇರಿದತೆ ಇತರೆ ವಸ್ತು ಹಾಳಾಗಿವೆ. ಕೆಲವು ಮಣ್ಣಿನ ಮನೆಗಳು ಕುಸಿಯುವ ಹಂತ ತಲುಪಿವೆ. ನೀರಿನ ಹಾವಳಿಯಿಂದ ಜನರು ತೊಂದರೆಗೀಡಾಗಿದ್ದಾರೆ.

ತಾಲ್ಲೂಕು ಆಡಳಿತ ಈ ಬಗ್ಗೆ ತುರ್ತುಗಮನ ಹರಿಸಿ ಮುಂದೆ ನೀರು ಬಡಾವಣೆಗೆ ನುಗ್ಗದಂತೆ ಕ್ರಮಕೈಗೊಳ್ಳಬೇಕು ಹಾಗೂ ನೀರು ನುಗ್ಗಿ ತೊಂದರೆಗೀಡಾಗಿರುವ ಬಡಜನರಿಗೆ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಮುಖಂಡ ಮಹದೇವ್, ಅಂಕರಾಜ್, ಒತ್ತಾಯಿಸಿದ್ದಾರೆ.

ಕುಸಿದ ಮನೆ: ಅಪಾಯದಿಂದ ಪಾರು
ಸಂತೇಮರಹಳ್ಳಿ: ಭಾನುವಾರ ರಾತ್ರಿ ಸುರಿದ ಗಾಳಿ-ಮಳೆಗೆ ಮನೆ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಸಮೀಪದ ಬಡಗಲ ಮೋಳೆ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಗ್ರಾಮದ ಮಹದೇವಶೆಟ್ಟಿ ಎಂಬುವವರಿಗೆ ಸೇರಿದ ಮನೆ ಗಾಳಿ-ಮಳೆಗೆ ಕುಸಿದಿದೆ. 3 ತಿಂಗಳಿನಿಂದ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿದ್ದಿರಲಿಲ್ಲ.

ಮನೆಯಲ್ಲಿದ್ದವರು ಮುಂಜಾನೆಯೇ ಎದ್ದು ಪ್ಲಾಸ್ಟಿಕ್ ಹಗ್ಗ ನೇಯಲು ಹೊರಗಡೆ ಹೋದ ತಕ್ಷಣದಲ್ಲಿಯೇ ಈ ಘಟನೆ ಸಂಭವಿಸಿದೆ.

ಮನೆಯಲ್ಲಿದ್ದ ಪಾತ್ರೆಗಳೆಲ್ಲವೂ ಜಖಂಗೊಂಡಿವೆ. ಆಹಾರ ಪದಾರ್ಥಗಳು, ಬಟ್ಟೆಗಳೆಲ್ಲವೂ ಹಾಳಾಗಿವೆ.
ಇದುವರೆವಿಗೂ ಯಾವ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ. ಗ್ರಾಮದಲ್ಲಿ ಇನ್ನೂ ಹಲವು ಕಪ್ಪು ಮಣ್ಣಿನಿಂದ ಮನೆಗಳು ನಿರ್ಮಿತವಾಗಿವೆ. ಮುಂದಾಗುವ ಅನಾಹುತ ತಪ್ಪಿಸಲು ಅಧಿಕಾರಿಗಳು ಎಚ್ಚರವಹಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

`ಪ್ಲಾಸ್ಟಿಕ್ ಚೀಲದಿಂದ ಹಗ್ಗ ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೆ, ಎಂದಿನಂತೆ ಇಂದು ಬೆಳಿಗ್ಗೆ ಹಗ್ಗ ನೇಯಲು ಹೊರಗಡೆ ಬಂದಾಗ ಈ ಘಟನೆ ಸಂಭವಿಸಿದೆ. ಒಳಗಡೆ ಇದ್ದರೆ ನಾವ್ಯಾರು ಬದುಕುತ್ತಿರಲಿಲ್ಲ. ಸ್ವಂತಕ್ಕೆ ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ ಸರ್ಕಾರದವರು ಪರಿಹಾರ ಕೊಡಿಸಿ ಮನೆ ನಿರ್ಮಿಸಿಕೊಡಬೇಕು~ ಎಂದು ಸಂತ್ರಸ್ತ ಮಹದೇವಶೆಟ್ಟಿ ಒತ್ತಾಯಿಸಿದ್ದಾರೆ.

ಭಾರಿ ಮಳೆ, ಹಲವೆಡೆ ತೊಂದರೆ

ಯಳಂದೂರು: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಗೆ ಕೆಲವೆಡೆ ಸಾರ್ವಜನಿಕರು ತೊಂದರೆ ಅನುಭವಿಸುಂತಾಯಿತು. 

  ಪಟ್ಟಣದ ಜನತಾ ಕಾಲೋನಿ ಸೇರಿದಂತೆ ಹಲವೆಡೆ ಮಳೆ ನೀರು ಚರಂಡಿ ಮೂಲಕ ಮನೆಗೆ ನುಗ್ಗಿದ್ದರಿಂದ ಇಲ್ಲಿನ ವಾಸಿಗಳಿಗೆ ತೊಂದರೆಯಾ ಯಿತು. ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲೂ ಸಹ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ. ಪಟ್ಟಣದಿಂದ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಗುಂಬಳ್ಳಿ ಬಳಿ ರಸ್ತೆ ಹಳ್ಳಬಿದ್ದಿದೆ.

ಇದರಲ್ಲಿ ಮಳೆ ನೀರು ಸಂಗ್ರಹವಾಗಿ ರುವುದರಿಂದ ವಾಹನ ಸವಾರರು ತೆರಳಲು ಪರಿಪಾಟಲು ಪಡುತ್ತಿದ್ದ  ದೃಶ್ಯ ಸಾಮಾನ್ಯವಾಗಿತ್ತು. ಬೆಟ್ಟದ ಕಲ್ಯಾಣಿ ಕೊಳಕ್ಕೆ ತೆರಳುವ ಮಾರ್ಗದ ಮೆಟ್ಟಿಲುಗಳ ಬದುಗಳಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ಹೂಳು ತುಂಬಿದ್ದು ಇದೆಲ್ಲಾ ಮಳೆ ನೀರಿನಲ್ಲಿ ಕೊಚ್ಚಿ ಕೊಳವನ್ನು ಸೇರಿದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.