ADVERTISEMENT

ನಾಯಕ ಜನಾಂಗಕ್ಕೆ ಶೇ 7.5 ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 10:00 IST
Last Updated 18 ಅಕ್ಟೋಬರ್ 2011, 10:00 IST

ಚಾಮರಾಜನಗರ: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿರುವ ನಾಯಕ ಜನಾಂಗಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ವಾಲ್ಮೀಕಿ ಟ್ರಸ್ಟ್ ನೇತೃತ್ವದಡಿ ಸಮಾಜ ಬಾಂಧವರು ಧರಣಿ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ನಡೆಸಿ ಕೂಡಲೇ, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕವಾಗಿ ಶೇ. 7.5ರಷ್ಟು ಮೀಸಲಾತಿ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ರಾಜಕೀಯ ಹಾಗೂ ಆರ್ಥಿಕವಾಗಿ ಇಷ್ಟು ಪ್ರಮಾಣದ ಮೀಸಲಾತಿ ನೀಡುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಶೇ. 3ರಷ್ಟು ಮೀಸಲಾತಿ ನೀಡುತ್ತಿದೆ. ಇದರಿಂದ ನಾಯಕ ಜನಾಂಗದವರು ತೊಂದರೆ ಅನುಭವಿಸುವಂತಾಗಿದೆ. ಈ ತಾರತಮ್ಯ ಸರಿಪಡಿಸ ಬೇಕು. ಎಲ್ಲ ಕ್ಷೇತ್ರಗಳಲ್ಲೂ ಕೇಂದ್ರದ ಮಾದರಿ ಅನ್ವಯ ಮೀಸಲಾತಿ ಕಲ್ಪಿಸಬೇಕು ಎಂದರು.

ಮೀಸಲಾತಿ ತಾರತಮ್ಯದಿಂದಾಗಿ ಸಮಾಜದ ಯುವಕರಿಗೆ ಉದ್ಯೋಗಗಳು ಸಿಗುತ್ತಿಲ್ಲ. ವೃತ್ತಿಪರ ಕೋರ್ಸ್‌ನಲ್ಲಿ ಹೆಚ್ಚಿನ ಅವಕಾಶ ಸಿಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ದಶಕದಿಂದಲೂ ಈ ವಂಚನೆ ನಡೆದಿದೆ. ಇದರಿಂದ ಸಮಾಜ ಪ್ರತಿನಿಧಿಸುವ ಅಧಿಕಾರಿಗಳ ಮುಂಬಡ್ತಿಗೂ ತೊಂದರೆಯಾಗಿದೆ ಎಂದು ದೂರಿದರು.

ತಾಲ್ಲೂಕುಮಟ್ಟದಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ ಹಾಸ್ಟೆಲ್‌ಗಳ ಸಂಖ್ಯೆ ಕಡಿಮೆ ಯಿದೆ. ಇದರಿಂದ ಸಮಾಜ ಶೈಕ್ಷಣಿಕವಾಗಿ ಹಿಂದುಳಿಯುತ್ತಿದೆ. ಸಮರ್ಪಕ ಹಾಸ್ಟೆಲ್ ಸಿಗದೆ ವಿದ್ಯಾರ್ಥಿಗಳು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕು ಗೊಳಿಸುತ್ತಿದ್ದಾರೆ. ಸಮುದಾಯದಲ್ಲಿ ಬಹಳಷ್ಟು ಮಂದಿ ಕಡುಬಡವರಿದ್ದಾರೆ. ಅವರ ಮಕ್ಕಳಿಗೆ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ತೆರೆಯಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ನಂಬಿಕೊಂಡು ಓದುತ್ತಿದ್ದಾರೆ. ಆದರೆ, ಸಕಾಲದಲ್ಲಿ ವಿದ್ಯಾರ್ಥಿವೇತನ ನೀಡುತ್ತಿಲ್ಲ. ಎರಡು- ಮೂರು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಪ್ರತಿವರ್ಷವೂ ನೀಡುವಂತಹ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಮೀಸಲಿಟ್ಟಿದೆ. ಆದರೆ, ಅರ್ಧದಷ್ಟು ಅನುದಾನ ದುರ್ಬಳಕೆಯಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಬೇಕು. ಜತೆಗೆ, ಅನುದಾನದ ಸದ್ಬಳಕೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಚೂಡಾ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ನಗರಸಭೆ ಸದಸ್ಯ ಸುರೇಶ್‌ನಾಯಕ, ಮುಖಂಡ ರಾದ ಕಪಿನಿನಾಯಕ, ವೆಂಕಟರಾಮನಾಯಕ, ಆನಂದ, ಎಚ್.ವಿ. ಚಂದ್ರು, ಬಸವರಾಜು, ವೆಂಕಟರಾಮು, ರವಿಕುಮಾರ್, ಸುರೇಶ್‌ನಾಗ್, ಶಿವಣ್ಣ, ಚಾ.ಪು. ಬಂಗಾರು, ಮಹದೇವನಾಯಕ, ಸಿದ್ದನಾಯಕ, ಶಿವಪ್ರಕಾಶ್, ಗೋವಿಂದನಾಯಕ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.