ADVERTISEMENT

ನಿಸರ್ಗದ ಒಡನಾಟ ವಂಚಿತ ಮಕ್ಕಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 6:48 IST
Last Updated 6 ಜೂನ್ 2017, 6:48 IST
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ. ರಾಮು ಉದ್ಘಾಟಿಸಿದರು
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ. ರಾಮು ಉದ್ಘಾಟಿಸಿದರು   

ಚಾಮರಾಜನಗರ: ‘ಕೃತಕ ಬದುಕಿನ ಅನುಕರಣೆಯಿಂದ ನಾವು ವಾಸ್ತವ ಜಗತ್ತಿನ ಯಾವ ಅಂಶವನ್ನೂ ಅನುಭವಿಸಲು ಸಾಧ್ಯವಿಲ್ಲ. ಅದು ದಕ್ಕುವುದು ನಿಸರ್ಗ ದೊಂದಿಗಿನ ಒಡನಾಟದಿಂದ ಮಾತ್ರ’ ಎಂದು ಜಿಲ್ಲಾಧಿಕಾರಿ ಬಿ. ರಾಮು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ರಂಗವಾಹಿನಿ ಮತ್ತು ರಂಗ ತರಂಗ ಸಂಸ್ಥೆಗಳು ನಗರದ ಜೆ.ಎಚ್‌. ಪಟೇಲ್ ಸಭಾಂ ಗಣದಲ್ಲಿ ಸೋಮ ವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು.

‘ನಾನು ಬಾಲ್ಯದ ಪರಿ ಪೂರ್ಣತೆಯನ್ನು ಅನುಭವಿಸಿದ್ದೇನೆ. ಅದು ಓದುವುದಕ್ಕೆ ಸೀಮಿತವಾಗಿರಲಿಲ್ಲ. ಕೆರೆಯಲ್ಲಿ ಈಜುವುದು, ಕಾಡು ಸುತ್ತುವುದು, ಕೆಸರಿನಲ್ಲಿ ಆಡುವುದು, ಹೀಗೆ ಪರಿಸರದೊಂದಿಗೆ ಬೆರೆಯುವ ಅವಕಾಶ ವಿತ್ತು. ಆ ಭಾಗ್ಯ ಈಗಿನ ಮಕ್ಕಳಿಗಿಲ್ಲ. ಅವರಲ್ಲಿ ಟಿ.ವಿ. ಯಲ್ಲಿಯೂ ಕಾಡನ್ನು ನೋಡುವ ಆಸಕ್ತಿಯಿಲ್ಲ. ಕಾರ್ಟೂನ್‌ ಚಾನೆಲ್‌ಗಳಿಗೆ ಅಂಟಿಕೊಂಡಿರುತ್ತಾರೆ’ ಎಂದು ವಿಷಾದಿಸಿದರು.

ADVERTISEMENT

‘ನಾವು ಆಸ್ತಿಪಾಸ್ತಿಗಳನ್ನು ಪಿತ್ರಾರ್ಜಿತವಾಗಿ ಪಡೆದು ಕೊಳ್ಳುತ್ತೇವೆ. ಆದರೆ, ಯಥೇಚ್ಛವಾಗಿ ಬಳಸಿರುವ ಪರಿಸರ ವನ್ನು ಹಾಗೆ ನೀಡಲು ಉಳಿಸಿಲ್ಲ. ಬದಲಾಗಿ, ನಾವು ಈಗ ಪರಿಸರದ ಸಾಲದ ಹೊರೆಯನ್ನು ಮಕ್ಕಳಿಗೆ ವರ್ಗಾಯಿಸುತ್ತಿ ದ್ದೇವೆ. ಅದನ್ನು ಅವರು ತೀರಿಸಬೇಕಾಗಿದೆ’ ಎಂದರು.

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಪಿ. ರಾಘವೇಂದ್ರ ಮಾತನಾಡಿ, ‘ನಾವು ಪರಿಸರವನ್ನು ಅರಿತುಕೊಳ್ಳುವ ಮೊದಲು, ನಮ್ಮ ದೇಹದ ಪರಿಸರ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕು. ಶರೀರದ ಚಟುವಟಿಕೆಯ ತಿಳಿವಳಿಕೆ ಇದ್ದರೆ, ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವುದು ಸುಲಭ’ ಎಂದು ತಿಳಿಸಿದರು.

‘ಹವಾನಿಯಂತ್ರಣದ ಸೌಲಭ್ಯವಿರುವ ಮನೆಯಲ್ಲಿ ಸಕಲ ಸೌಕರ್ಯಗಳ ನಡುವೆ ಬೆಳೆಯುವ ಮಗುವಿಗಿಂತ ಕೂಲಿ ಮಾಡುವ ಮಹಿಳೆಗೆ ಜನಿಸಿ, ಆಕೆಯ ಬೆವರುಯುಕ್ತ ಹಾಲು ಕುಡಿಯುವ ಮಗು ಹೆಚ್ಚು ಆರೋಗ್ಯಪೂರ್ಣವಾಗಿರುತ್ತದೆ.

ಆಧುನಿಕ ಜಗತ್ತಿನಲ್ಲಿ ನಮ್ಮನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಊಟಕ್ಕೆ ಮುನ್ನ ಸೋಪಿನಲ್ಲಿ ಚೆನ್ನಾಗಿ ಕೈತೊಳೆಯಬೇಕು ಎನ್ನುತ್ತಾರೆ. ಆದರೆ, ಅದರಿಂದ ರಾಸಾಯನಿಕ ಯುಕ್ತ ಸೋಪಿನ ನೀರು ಭೂಮಿಯ ಒಡಲನ್ನು ಸೇರುತ್ತದೆ. ಈ ಸತ್ಯಗಳನ್ನು ಮರೆಮಾಚಿ, ಸುಳ್ಳನ್ನು ನಮ್ಮ ಮುಂದಿರಿಸುತ್ತಾರೆ’ ಎಂದು ಹೇಳಿದರು.

ಬಹುಮಾನ ಪ್ರಧಾನ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸ ಲಾಯಿತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ಲಿಂಗರಾಜು, ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ. ಆನಂದ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಕಾರ್ಯದರ್ಶಿ ರಾಮಚಂದ್ರ ವಿ.ಎಂ., ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗ ರಾಜು, ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್‌ ಉಪಸ್ಥಿತರಿದ್ದರು.

‘ವಿವಾದವಾದ ಮನವಿ'
‘ಜನರು ಇಂದು ವ್ಯವಸ್ಥೆಯನ್ನು ವಿರೋಧಿಸುವ ಮನಸ್ಥಿತಿಗೆ ತಲುಪಿದ್ದಾರೆ. ಮಳೆ ಚೆನ್ನಾಗಿ ಆಗಿರುವುದರಿಂದ ಬಿತ್ತನೆ ಮಾಡಿ ಎಂದು ರೈತರಲ್ಲಿ ಮನವಿ ಮಾಡಿದ್ದೆ. ಅದನ್ನೇ ಮಾಧ್ಯಮಗಳು ದೊಡ್ಡ ವಿವಾದವನ್ನಾಗಿಸಿದವು’ ಎಂದು ಜಿಲ್ಲಾಧಿಕಾರಿ ಬಿ. ರಾಮು ಅಸಮಾಧಾನ ವ್ಯಕ್ತಪಡಿಸಿದರು.

‘ಅರಣ್ಯಾಧಿಕಾರಿಗಳು ರಾಜ್ಯದ ಜನರ ವೈರಿಗಳಾಗಿದ್ದಾರೆ. ಕಾಡು ಬೆಳೆಸಲು ಹೋಗಿ ಅವರು ನಿಷ್ಠುರ ಕಟ್ಟಿಕೊಳ್ಳುತ್ತಾರೆ. ಎಲ್ಲದಕ್ಕೂ ಅವರನ್ನೇ ಹೊಣೆಗಾರರನ್ನಾಗಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚು ಮಳೆಯಾಗಿದ್ದರೂ, ಬಿತ್ತನೆ ಕೆಲಸ ಚುರುಕಾಗಿಲ್ಲ. ಇದು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ವಿರುದ್ಧವಾಗಿದೆ. ಬಿತ್ತನೆ ಮಾಡದವರ ವಿರುದ್ಧ ಸೆಕ್ಷನ್‌ 84ರ ಅಡಿ ನೋಟಿಸ್‌ ನೀಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಇತ್ತೀಚೆಗೆ ಪ್ರಕಟಣೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.