ADVERTISEMENT

ನೀರಿನ ಕೊರತೆ ನೀಗುವುದೆ?

ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪಪೂ ಕಾಲೇಜು

ಪ್ರಜಾವಾಣಿ ವಿಶೇಷ
Published 1 ಜೂನ್ 2013, 11:15 IST
Last Updated 1 ಜೂನ್ 2013, 11:15 IST

ಗುಂಡ್ಲುಪೇಟೆ: ಶ್ರೀ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಸುಮಾರು ಐದಾರು ತಿಂಗಳಿಂದಲೂ ಕುಡಿಯುವ ನೀರಿಲ್ಲದೇ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪರದಾಡಬೇಕಾಗಿದೆ. ಈಗ ಬೇಸಿಗೆ ರಜೆ ಕಳೆದು ಶಾಲೆ, ಕಾಲೇಜು ಮತ್ತೆ ಆರಂಭವಾಗಿವೆ. ಆದರೂ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಇನ್ನೂ ಸರಿಯಾಗಿಲ್ಲ. ಬಿಸಿಯೂಟದ ಕಥೆಯನ್ನು ದೇವರೇ ಬಲ್ಲ!

ಈ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗ ಮತ್ತು ಪದವಿಪೂರ್ವ ಕಾಲೇಜು ಸೇರಿ ಒಟ್ಟು 1250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1950ರ ಸುಮಾರಿನಲ್ಲಿ ಆರಂಭವಾದ ಈ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷ 600 ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಾರೆ. ಗುಂಡ್ಲುಪೇಟೆ ಪಟ್ಟಣದ ದೊಡ್ಡ ವಿದ್ಯಾಸಂಸ್ಥೆ ಇದಾಗಿದೆ. ಆರಂಭದಿಂದಲ್ಲಿ ವ್ಯವಸ್ಥಿತವಾಗಿ ನಡೆದ ಈ ಕಾಲೇಜಿನಲ್ಲಿ ಇತ್ತೀಚೆಗೆ ಅವ್ಯವಸ್ಥೆಗಳು ಎದುರಾಗಿವೆ. ಪಟ್ಟಣದ ಕೆಲ ವಿದ್ಯಾರ್ಥಿಗಳು ಶಾಲಾ ಬ್ಯಾಗ್ ಜತೆಗೆ ಕುಡಿಯುವ ನೀರನ್ನೂ ಹೊತೊಯ್ಯುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಿಂದ ಬರುವ ಮ
ಕ್ಕಳ ಸ್ಥಿತಿ ಚಿಂತಾಜನಕ.

200 ಅಡಿ ಆಳದ ಕೊಳವೆಬಾವಿಯಿಂದ ಈ ಕಾಲೇಜಿಗೆ ನೀರು ಪೂರೈಕೆಯಾಗುತ್ತದೆ. ಇತ್ತೀಚೆಗೆ  ಕೊಳವೆಬಾವಿಯ ಆಳಕ್ಕೆ ನೀರೆತ್ತುವ ಪಂಪ್ ಬಿದ್ದ ಕಾರಣ ನೀರಿನ ಬವಣೆ ಉಂಟಾಗಿದೆ. ಮಾತ್ರವಲ್ಲ; ನೀರಿನ ಸೌಲಭ್ಯ ಕಲ್ಪಿಸಲು ಬೇಕಾದ ಅಗತ್ಯ ಹಣಕಾಸು ಇಲ್ಲದಿರುವುದೂ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆ.

ಬಿಸಿಯೂಟದ ಕಥೆ ಏನು?
ಪ್ರೌಢಶಾಲೆ ವಿಭಾಗದಲ್ಲಿ ಮಧ್ಯಾಹ್ನದ ಬಿಸಿಯೂಟ ಜಾರಿಯಲ್ಲಿದೆ. ಅದರ ಉಸ್ತುವಾರಿ ಹೊತ್ತಿರುವ ಶಿಕ್ಷಕರ ಪಾಡಂತೂ ಹೇಳತೀರದು. ಊಟ ತಯಾರಿಸಲು ಹಾಗೂ ಊಟದ ನಂತರ ಕುಡಿಯಲು ನೀರೇ ಇಲ್ಲದಿದ್ದರೆ ಹೇಗೆ?

ಇಷ್ಟೆಲ್ಲ ಸಮಸ್ಯೆಗಳ ನಡುವೆಯೇ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದಿನ ದೂಡಬೇಕಾಗಿದೆ. ಆದರೂ ಜಿಲ್ಲಾ ಪಂಚಾಯಿತಿ, ಪುರಸಭೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಕಣ್ಣುಹಾಯಿಸಿಲ್ಲ.

ಶೌಚಾಲಯದ ಕಥೆ ಏನು?
ಈಗ ಮತ್ತೆ ಶಾಲೆ, ಕಾಲೇಜು ಆರಂಭವಾಗಿದ್ದರೂ ನೀರಿನ ಚಿಂತೆಯೇ ಎಲ್ಲರ ಮುಂದಿದೆ. ಇದರಿಂದ ಪ್ರಾರಂಭೋತ್ಸವದ ಸಂಭ್ರಮಕ್ಕೆ ಮಂಕು ಬಡಿದಂತಾಗಿದೆ.

ಕುಡಿಯುವ ನೀರನ್ನು ಮನೆಯಿಂದ ಹೊತ್ತೊಯ್ಯಬಹುದು. ಆದರೆ, ಶೌಚಾಲಯದ ಕಥೆ ಏನು? ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಏಕೆ ಗಮನಹರಿಸುತ್ತಿಲ್ಲ ಎಂಬ ಪ್ರಶ್ನೆ ಇಲ್ಲಿನ ಸಿಬ್ಬಂದಿಯನ್ನು ತೀವ್ರ ಕಾಡುತ್ತಿದೆ.

ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನೀರು ಸರಬರಾಜು ಇಲ್ಲದಿದ್ದರೆ ಕಾಲೇಜು ಕ್ಯಾಂಪಸ್‌ನಲ್ಲಿ ಸ್ವಚ್ಛತೆ ಕಾಪಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ವಿದ್ಯಾರ್ಥಿಗಳಾದ ಮಹದೇವಸ್ವಾಮಿ, ಶಂಕರ, ಮಂಜುಳ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.