ADVERTISEMENT

ಪುಷ್ಕರಿಣಿ ಉತ್ಖನನಕ್ಕೆ ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 8:45 IST
Last Updated 17 ಸೆಪ್ಟೆಂಬರ್ 2011, 8:45 IST

ಚಾಮರಾಜನಗರ: ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದ ಮಣ್ಣಿನಲ್ಲಿ ಹೂತುಹೋಗಿರುವ ಪುಷ್ಕರಿಣಿಯ ಉತ್ಖನನಕ್ಕೆ ಜಿಲ್ಲಾಡಳಿತ ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ದೇವಸ್ಥಾನ ಭಕ್ತಾದಿಗಳ ಒಕ್ಕೂಟ ಒತ್ತಾಯಿಸಿದೆ.

`ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಈ ಹಿಂದೆ ಪುಷ್ಕರಿಣಿಯ ನೀರನ್ನು ಅಭಿಷೇಕ ಹಾಗೂ ಶುಭ ಕಾರ್ಯಗಳಿಗೆ ಬಳಸಲಾಗುತಿತ್ತು. ಪ್ರಸ್ತುತ ಮಣ್ಣಿನಲ್ಲಿ ಹೂತು ಹೋಗಿರುವುದರಿಂದ ಅದರ ಅಸ್ತಿತ್ವ ಕಳೆದುಕೊಂಡಿದೆ. ಹಾಗಾಗಿ, ಉತ್ಖನನ ನಡೆಸಿ ಪುಷ್ಕರಿಣಿಯ ಪುನರುಜ್ಜೀವನಕ್ಕೆ ಒತ್ತು ನೀಡಬೇಕು~ ಎಂದು ಒಕ್ಕೂಟದ ಸದಸ್ಯ ಚಾ.ರಂ. ಶ್ರೀನಿವಾಸಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಒಂದು ತಿಂಗಳೊಳಗೆ ಉತ್ಖನನ ಕಾರ್ಯ ಕೈಗೆತ್ತಿಕೊಳ್ಳಬೇಕು. ಈ ಸಂಬಂಧ ಮುಜರಾಯಿ ಇಲಾಖೆ ಸೇರಿದಂತೆ ಎಲ್ಲ ವರ್ಗದ ಜನರ ಸಭೆ ಕರೆದು ಚರ್ಚಿಸಬೇಕು. ಎಲ್ಲರ ವಿಶ್ವಾಸ ಪಡೆದು ಅಗತ್ಯ ಕ್ರಮಕೈಗೊಳ್ಳಬೇಕು. ದೇವಸ್ಥಾನದ ಜೀರ್ಣೋದ್ಧಾರಕ್ಕೆ 5 ಕೋಟಿ ರೂ ಮಂಜೂರು ಮಾಡಬೇಕು. ನೂತನ ದೊಡ್ಡರಥದ ನಿರ್ಮಾಣಕ್ಕೆ 1 ಕೋಟಿ ರೂ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ದೇವಸ್ಥಾನದಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಪೂಜೆಗಳು ನಡೆಯುತ್ತಿಲ್ಲ. ತಕ್ಷಣವೇ ಖಾಲಿ ಇರುವ ಅರ್ಚಕರು, ನೌಕರರ ನೇಮಕಕ್ಕೆ ಕ್ರಮಕೈಗೊಳ್ಳಬೇಕು. ಅವರಿಗೆ 2 ಸಾವಿರ ರೂ ಸಂಬಳ ನೀಡಬೇಕು. ಈ ಹಿಂದೆ ನಡೆಯುತ್ತಿದ್ದ ವೈಭವಯುತವಾದ ಉತ್ಸವ ಆರಂಭಿಸಲು ಮುಂದಾಗಬೇಕು. 15 ದಿನದೊಳಗೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚಿಸಬೇಕು. ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇಮಕ ಮಾಡಿ ದೇವಸ್ಥಾನಕ್ಕೆ ಸೇರಿದ ಆಸ್ತಿಯನ್ನು ಸಂರಕ್ಷಿಸಬೇಕು ಎಂದರು.

ಪುಷ್ಕರಿಣಿಯ ಉತ್ಖನನದಿಂದ ಉದ್ಯಾನದ ಶೇ. 30ರಷ್ಟು ಭಾಗ ಮಾತ್ರ ತೆರವುಗೊಳ್ಳುತ್ತದೆ. ಉಳಿದ ಪ್ರದೇಶಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದರು.

ವಾರ್ಷಿಕ ಆದಾಯ: ದೇವಸ್ಥಾನಕ್ಕೆ ವಾರ್ಷಿಕವಾಗಿ 7,58,195 ರೂ ಆದಾಯವಿದೆ. ಇದರಲ್ಲಿ 3,39,985 ರೂ ಖರ್ಚಾಗುತ್ತಿದ್ದು, ಉಳಿದ ಹಣ ಸರ್ಕಾರಕ್ಕೆ ಸಂದಾಯವಾಗುತ್ತಿದೆ. 30ಕ್ಕೂ ಹೆಚ್ಚು ಅಂಗಡಿಮಳಿಗೆಗಳಿವೆ. ಈ ಹಿಂದೆ ನಿಗದಿಪಡಿಸಿರುವ ಬಾಡಿಗೆ ದರವನ್ನೇ ಈಗಲೂ ವ್ಯಾಪಾರಿಗಳು ನೀಡುತ್ತಿದ್ದಾರೆ ಎಂದರು.

ವಾರ್ಷಿಕವಾಗಿ ಅಂಗಡಿಗಳ ಬಾಡಿಗೆಯಿಂದ 4.14 ಲಕ್ಷ ರೂಪಾಯಿ ಬರುತ್ತಿದೆ. ಸಂಸ್ಕೃತ ಪಾಠಶಾಲೆಯಿಂದ 12 ಸಾವಿರ ರೂ, ದೇವಸ್ಥಾನ ಸಮೀಪವಿರುವ ಗ್ರಂಥಾಲಯದಿಂದ 47,100 ಸಾವಿರ ರೂ, ದೇವಸ್ಥಾನಕ್ಕೆ ಸೇರಿದ 18 ದತ್ತು ಗ್ರಾಮಗಳಿಂದ 28,100 ಸಾವಿರ ರೂ, ಅರ್ಚನೆ, ಅಷ್ಟೋತ್ತರ ಪೂಜೆಗಳಿಂದ 56,930 ಸಾವಿರ ರೂ ಹಾಗೂ ಹುಂಡಿಗಳಿಂದ 1,90 ಲಕ್ಷ ರೂ ಬರುತ್ತದೆ. ಹುಂಡಿ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟರೆ ವರ್ಷಕ್ಕೆ ಕನಿಷ್ಠ 10 ಸಾವಿರ ರೂ ಬಡ್ಡಿ ಬರುತ್ತದೆ ಎಂದು ಹೇಳಿದರು.

ವಿಶೇಷ ದಿನಗಳಂದು ದೇವರಿಗೆ ವಜ್ರ ಮತ್ತು ಚಿನ್ನಾಭರಣದ ಅಲಂಕಾರ ಮಾಡಬೇಕು. ಚಿನ್ನಾಭರಣ ಎಷ್ಟಿವೆ? ಎಂಬ ಬಗ್ಗೆ ಮುಜರಾಯಿ ಇಲಾಖೆ ಶ್ವೇತಪತ್ರ ಹೊರಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದ ಅವರು, ಪುಷ್ಕರಿಣಿಯ ಉತ್ಖನನಕ್ಕೆ ಯಾವುದೇ ಸಂಘಟನೆಗಳು ವಿರೋಧ ಮಾಡಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್‌ನಾಯಕ, ಸಿ.ಕೆ. ಮಂಜುನಾಥ್, ನಂಜುಂಡಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.