ADVERTISEMENT

ಬಣಜಿಗ, ಬಲಿಜ ದಾಖಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2015, 8:12 IST
Last Updated 4 ಏಪ್ರಿಲ್ 2015, 8:12 IST

ಮೈಸೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತ ಸಮೀಕ್ಷೆಯಲ್ಲಿ ಸಮಾಜದ ಜನರು ಉಪ ಜಾತಿಗಳಿಗಿಂತಲೂ, ಜಾತಿ ಅಂಕಣದಲ್ಲಿ ಬಣಜಿಗ, ಬಲಿಜ ಎಂದು ದಾಖಲಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು  ನೀಡಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮಾಜಿ ಸದಸ್ಯ ಎಚ್.ಎ. ವೆಂಕಟೇಶ್ ಸಲಹೆ ಮಾಡಿದರು.

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಯೋಗಿನಾರೇಯಣ ಬಣಜಿಗ (ಬಲಿಜ) ಯುವಕ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಕ್ರಮ ಸಮಾಜದ ಎಲ್ಲ ಜನರು ಒಂದೇ ಚೌಕಟ್ಟಿನಲ್ಲಿ ಬಂದು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ’ ಎಂದರು.

ಬಣಜಿಗ, ಎಲೆ ಬಣಜಿಗ, ದಾಸ ಬಣಜಿಗ ಎಂದು ಅನೇಕ ಉಪಜಾತಿಗಳು ನಮ್ಮ ಜಾತಿಯಲ್ಲಿವೆ. ಆದರೂ, ಜಾತಿ ಅಂಕಣದಲ್ಲಿ ಪ್ರಧಾನವಾಗಿ ಬಲಿಜ ಮತ್ತು ಬಣಜಿಗ  ಎಂದು ದಾಖಲಿಸಬೇಕು. ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದರು. 

‘ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಬಣಜಿಗ, ಬಲಿಜ, ದಾಸ ಬಣಜಿಗ ಅನ್ನು ಹಿಂದುಳಿದ ವರ್ಗಗಳ ಗುಂಪಿನಲ್ಲಿ ಸೇರಿಸಿದೆ. ಇದರ ಸದುಪಯೋಗ ಪಡೆದು ಕೊಂಡರೆ ಉದ್ಯೋಗಾವಕಾಶ ಪಡೆಯು ವುದು ಕೂಡಾ ಸುಲಭ. ಈ ಸಾಧ್ಯತೆಗಳತ್ತಲೂ ಸಮಾಜದ ಜನರನ್ನು ಜಾಗೃತಗೊಳಿಸ ಬೇಕಾಗಿದೆ ಎಂದರು.

ಸಮಾಜದ ಸಂಘಟನೆಯ ದೃಷ್ಟಿ ಯಿಂದ ಬಲಿಜ, ಬಣಜಿಗ ಎಂದು ಮಾತ್ರ ದಾಖಲಿಸಬೇಕು, ವಿವಿಧ ಕ್ಷೇತ್ರಗಳಲ್ಲಿ ಇರುವ ಸಮಾಜದ ಜನರನ್ನು ಒಂದೆಡೆ ತರುವ ಸಲುವಾಗಿ ಪ್ರತ್ಯೇಕ ವೆಬ್‌ಸೈಟ್‌ಗೆ ಚಾಲನೆ ನೀಡಬೇಕು; ಮಹಿಳಾ ಘಟಕವನ್ನು ಆರಂಭಿಸಬೇಕು ಎಂಬ ಸಲಹೆಗಳೂ ವ್ಯಕ್ತವಾದವು.

ಬರುವ ದಿನಗಳಲ್ಲಿ ಮಹಿಳಾ ಘಟಕ ವನ್ನು ಸ್ಥಾಪಿಸುವುದು ಸೇರಿದಂತೆ ಸಂಘ ಟನೆಯನ್ನು ಇನ್ನಷ್ಟು ಬಲಪಡಿಸಲು ಒತ್ತು ನೀಡಲಾಗುವುದು ಎಂದು ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಅಧ್ಯಕ್ಷ ಎಂ. ನಾರಾಯಣ್‌ ಭರವಸೆ ನೀಡಿದರು. ಗಣನೀಯ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಾಧ್ಯಾಪಕ ಆರ್‌.ಎನ್‌. ಜಗದೀಶ್‌, ಕೆ. ನಾದಾನಂದ,  ಸಮಾಜ ಸೇವಕಿ ಲಕ್ಷ್ಮೀ ಮಹೇಶ್‌, ಯುವಕ ಸಂಘದ ಅಧ್ಯಕ್ಷ ಡಾ.ಜಿ. ರಮೇಶ್‌ ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.