ADVERTISEMENT

ಬತ್ತಿದ ಕೆರೆ: ಹನಿ ನೀರಿಗೂ ತತ್ವಾರ

ಎನ್.ನಾಗರಾಜ್
Published 10 ಜೂನ್ 2012, 9:15 IST
Last Updated 10 ಜೂನ್ 2012, 9:15 IST

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಕೆರೆಯಾದ ಚಿಕ್ಕ ಕೆರೆ ಮತ್ತು ದೊಡ್ಡಕೆರೆಗೆ ನೀರು ಬಾರದೇ ಇರುವುದರಿಂದ ಸಂಪೂರ್ಣವಾಗಿ ಒಣಗಿದ್ದು ಜಮೀನುಗಳಿಗೆ ತೊಂದರೆಯಾಗಿದೆ.

ಈ ಹಿಂದೆ ಬೇರಂಬಾಡಿ ಕೆರೆಯಿಂದ ಮಲ್ಲಯ್ಯನಪುರ ಕೆರೆಗೆ ನೀರು ಬಂದು ನಂತರ ಪಟ್ಟಣದ ದೊಡ್ಡ ಕೆರೆ ತುಂಬಿ ಚಿಕ್ಕ ಕೆರೆಗೆ ನೀರು ಹರಿದು ಬಂದು ಗುಂಡ್ಲು ನದಿಗೆ ಸೇರುತ್ತಿತ್ತು.

ಈಗ ಈ ಕೆರೆಗಳಿಗೆ ನೀರು ಬಾರದೇ ಇರುವುದರಿಂದ ಅನೇಕ ಜನ ರೈತರು ಕೆರೆಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಕೈಗೊಂಡಿದ್ದಾರೆ. ಹೆಚ್ಚು ಮಳೆ ಯಾದರೂ ಕೆರೆ ತುಂಬುವುದಿಲ್ಲ. ಈ ಹಿಂದೆ ನೀರನ್ನು ಆಶ್ರಯಿಸಿ 800ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬತ್ತ ಹಾಗೂ ವಿವಿಧ ಬೆಳೆ ಬೆಳೆಯುತ್ತಿದ್ದರು.

30 ವರ್ಷಗಳಿಂದ ನೀರಿಲ್ಲ. ಈ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನವನ್ನು ಮಾಡಿಲ್ಲ. ಪ್ರಸ್ತುತ ಕಬಿನಿಯಿಂದ ನೀರು ತುಂಬಿಸುವ ಯೋಜನೆಯಡಿ ನಲ್ಲೂರು ಅಮಾನಿ ಕೆರೆ ಹಾಗೂ ಪಟ್ಟಣದ ಬಳಿ ಇರುವ ದೊಡ್ಡಕೆರೆ ಮತ್ತು ಚಿಕ್ಕಕೆರೆಗಳಿಗೆ ನೀರು ತುಂಬಿಸಿದರೆ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ವ್ಯವಸಾಯ ಕೈಗೊಳ್ಳಲು ಅನುಕೂಲವಾಗುತ್ತದೆ. ಆದರೆ, ಇದು ಆಗಿಲ್ಲ.

`ದೊಡ್ಡಕೆರೆಯಲ್ಲಿ ತುಂಬಿರುವ ಹೂಳ ತೆಗೆಸಬೇಕು. ಕೆರೆ ಒತ್ತುವರಿ ಜಾಗವನ್ನು ಮೊದಲು ಬಿಡಿಸಿ ತಾಲ್ಲೂಕು ಆಡಳಿತ ವಹಿಸಿ ಕೊಳ್ಳ ಬೇಕು. ಈ ಕೆರೆಗಳು ತುಂಬಿದರೆ ಅಂತರ್ಜಲದ ಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ.
 
ಇದರಿಂದ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೈಗೊಂಡಿರುವ ವ್ಯವಸಾಯಕ್ಕೆ ಅನುಕೂಲವಾಗುತ್ತದೆ ಹಾಗೂ ಜಾನುವಾರುಗಳ ಕುಡಿಯುವ ನೀರಿಗೂ ನೆರವಾಗುತ್ತದೆ~ ಎನ್ನುವುದು ಸುತ್ತಮುತ್ತಲಿನ ರೈತರುಗಳ ಅಭಿಪ್ರಾಯವಾಗಿದೆ. 

ತಾಲ್ಲೂಕಿನ ಪ್ರಮುಖ ಕೆರೆಗಳಲ್ಲಿ ತುಂಬಿರುವ ಗಿಡ ಗಂಟೆಗಳನ್ನು ತೆಗೆಯಿಸಿ ಎಲ್ಲಾ ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಸಣ್ಣ ನೀರಾವರಿ ಇಲಾಖೆ ಪ್ರಯತ್ನಿಸ ಬೇಕು ಮತ್ತು ಸರ್ಕಾರ ಕೆರೆ ಅಭಿವೃದ್ಧಿ ಯೋಜನೆಗೆ ಬಿಡುಗಡೆ ಮಾಡಿರುವ ಹಣವನ್ನು ಇದಕ್ಕಾಗಿಯೇ ಬಳಸಿ ಕೊಂಡರೆ ಅನುಕೂಲವಾಗುತ್ತದೆ ಎನ್ನುವುದು ರೈತ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಅಭಿಪ್ರಾಯವಾಗಿದೆ.

ಈ ಕೆರೆಗಳಿಗೆ ನೀರು ತುಂಬುವ ಬಗ್ಗೆ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ಕೆರೆಗಳಲ್ಲಿ ಸದಾ ಕಾಲ ನೀರು ನಿಲ್ಲುವಂತಹ ವ್ಯವಸ್ಥೆ ಮಾಡಿದರೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಮತ್ತು ವ್ಯವಸಾಯ ಕೈಗೊಳ್ಳಲು ರೈತರಿಗೆ ಅನುಕೂಲವಾಗುತ್ತದೆ ಎನ್ನುವುದು ರೈತರ ಒಕ್ಕೊರಲಿನ ಒತ್ತಾಯವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.