ADVERTISEMENT

ಬಾಲಾಪರಾಧಿಗಳ ಸಂಖ್ಯೆ ಹೆಚ್ಚಳಕ್ಕೆ ಕಳವಳ

​ಪ್ರಜಾವಾಣಿ ವಾರ್ತೆ
Published 1 ಮೇ 2011, 10:35 IST
Last Updated 1 ಮೇ 2011, 10:35 IST

ಚಾಮರಾಜನಗರ: ‘ಸಮಾಜದಲ್ಲಿ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ’ ಎಂದು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎ.ಎಸ್. ಪಚ್ಚಾಪುರೆ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಬಾಲನ್ಯಾಯ ಮಂಡಲಿ ಉದ್ಘಾಟನೆ ಮತ್ತು ಮಕ್ಕಳ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಧೀಶರು, ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚುತ್ತಿವೆ. ಇದು ಸಮಾಜದಲ್ಲಿ ಅಪರಾಧ ಹೆಚ್ಚಾಗಿರುವುದನ್ನು ಬಿಂಬಿಸುತ್ತದೆ. ಇದು ವಿಷಾದನೀಯ ಸಂಗತಿ. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಅಧ್ಯಾತ್ಮ ಮತ್ತು ಉತ್ತಮ ನಡವಳಿಕೆ ಕುರಿತು ಬೋಧಿಸಬೇಕು. ಆಗಮಾತ್ರ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎ.ಸಿ. ವಿದ್ಯಾಧರ್ ಮಾತನಾಡಿ, ‘ಮಕ್ಕಳು ಗೊತ್ತಿಲ್ಲದೇ ಅಪರಾಧ ಎಸಗುತ್ತಾರೆ. ಅವರನ್ನು ತಿದ್ದಿ ಸಮಾಜದ ಮುಖ್ಯವಾಹಿನಿಗೆ ತರುವುದು ಬಾಲನ್ಯಾಯ ಮಂಡಲಿಯ ಮುಖ್ಯ ಗುರಿಯಾಗಿದೆ’ ಎಂದು ಹೇಳಿದರು.

ಜಿಲ್ಲಾ ಬಾಲನ್ಯಾಯ ಮಂಡಲಿಯಲ್ಲಿ ಒಟ್ಟು 19 ಮೊಕದ್ದಮೆಗಳಿವೆ. ಇವುಗಳ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬಾಲನ್ಯಾಯ ಮಂಡಲಿಯು ವಾರದಲ್ಲಿ ಒಂದು ದಿನ ಕಾರ್ಯ ನಿರ್ವಹಿಸಲಿದೆ. ಇಲ್ಲಿ ವಕೀಲರು ಮತ್ತು ಸಿಬ್ಬಂದಿ ಸಾಮಾನ್ಯ ನ್ಯಾಯಾಲಯದಲ್ಲಿ ಧರಿಸುವಂತೆ ಸಮವಸ್ತ್ರ ಧರಿಸುವುದಿಲ್ಲ. ಮಕ್ಕಳಲ್ಲಿ ಅಪರಾಧ ಭಾವನೆ ಬಾರದಂತೆ ನೋಡಿಕೊಳ್ಳುವುದೇ ಇದರ ಉದ್ದೇಶವಾಗಿದೆ ಎಂದರು.

ಜಿಲ್ಲಾ ಬಾಲನ್ಯಾಯ ಮಂಡಲಿಯ ಅಧ್ಯಕ್ಷ ಕೆ.ಎಸ್. ಗಂಗಣ್ಣನವರ್, ಸದಸ್ಯರಾದ ಬಿ.ಎಸ್. ಬಸವರಾಜು, ದಾಕ್ಷಾಯಣಮ್ಮ, ಪಿ.ಪಿ. ಬಾಬುರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ. ಗೋಪಾಲಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ನಾಗರಾಜು, ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.