ADVERTISEMENT

ಮಂದಗತಿ ಕಾಮಗಾರಿ: ನಗರದಲ್ಲಿ ಸಂಚಾರದಟ್ಟಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 10:40 IST
Last Updated 22 ಮೇ 2018, 10:40 IST
ಚಾಮರಾಜನಗರದ ಭುವನೇಶ್ವರಿ ವೃತ್ತ (ಪಚ್ಚಪ್ಪ ವೃತ್ತ)ದಲ್ಲಿ ಸೋಮವಾರ ಉಂಟಾದ ಸಂಚಾರ ದಟ್ಟಣೆ ಹೀಗಿತ್ತು
ಚಾಮರಾಜನಗರದ ಭುವನೇಶ್ವರಿ ವೃತ್ತ (ಪಚ್ಚಪ್ಪ ವೃತ್ತ)ದಲ್ಲಿ ಸೋಮವಾರ ಉಂಟಾದ ಸಂಚಾರ ದಟ್ಟಣೆ ಹೀಗಿತ್ತು   

ಚಾಮರಾಜನಗರ: ನಗರದಲ್ಲಿ ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಸೋಮವಾರ ಸಂಚಾರ ದಟ್ಟಣೆಯಾಗಿ ವಾಹನ ಸವಾರರು ಪರದಾಡಿದರು. ವಾಹನಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರೂ ಹೈರಾಣಾದರು.

ಭುವನೇಶ್ವರ ವೃತ್ತ (ಪಚ್ಚಪ್ಪ ವೃತ್ತ)ದ ಬಳಿ ಉಂಟಾದ ಸಂಚಾರ ದಟ್ಟಣೆ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರನ್ನೂ ಕಾಡಿತು. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಕಾಂಕ್ರೀಟೀಕರಣ ಕಾಮಗಾರಿಗಾಗಿ ಒಂದು ಬದಿಯ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಒಂದೇ ಬದಿಯಲ್ಲಿ ಎರಡೂ ಕಡೆಯ ವಾಹನಗಳು ಚಲಿಸುತ್ತಿವೆ. ಈ ಬದಿಯ ರಸ್ತೆಯನ್ನೂ ಅಗೆದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.

‘ಬದಲಿ ರಸ್ತೆ ಸಂಚಾರ ಇಲ್ಲಿ ಕಷ್ಟ. ಆದರೆ, ಇರುವ ರಸ್ತೆಯನ್ನಾದರೂ ವೈಜ್ಞಾನಿಕವಾಗಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿತ್ತು. ಒಂದು ಕಡೆ ಕಾಂಕ್ರೀಟ್ ಹಾಕುವ ಕಾರ್ಯ ಪೂರ್ಣಗೊಳಿಸಿ ಅಲ್ಲಿ ಒಂದು ಕಡೆಯ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇತ್ತು. ಆದರೆ, ಹೀಗೆ ಮಾಡದ ಅಧಿಕಾರಿಗಳು ಒಂದು ಕಡೆ ಅರ್ಧ ಭಾಗ ಕಾಂಕ್ರೀಟ್ ಹಾಕಿ ಮತ್ತೊಂದು ಕಡೆ ಉಳಿದರ್ಧ ಕಾಂಕ್ರೀಟ್ ಹಾಕುತ್ತಿದ್ದಾರೆ. ಇದರಿಂದಲೇ ವಾಹನ ದಟ್ಟಣೆ ಹೆಚ್ಚಾಗಿದೆ’ ಎಂದು ವ್ಯಾಪಾರಿ ರಾಮಸ್ವಾಮಿ ತಿಳಿಸಿದರು.

ADVERTISEMENT

‘ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು, ಔಷಧ ಅಂಗಡಿಗಳು, ಜಿಲ್ಲಾಡಳಿತ ಭವನ ಇದೇ ರಸ್ತೆಯಲ್ಲಿರುವುದರಿಂದ ಸಹಜವಾಗಿಯೇ ಜನದಟ್ಟಣೆ ಅಧಿಕವಾಗಿರುತ್ತದೆ. ಸಂಚಾರಕ್ಕೆ ತೊಡಕಾಗದ ಹಾಗೆ ಕಾಮಗಾರಿ ನಿರ್ವಹಿಸಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಆದರೆ, ಅವೈಜ್ಞಾನಿಕ ನಿರ್ವಹಣೆಯಿಂದ ಹೀಗಾಗಿದೆ. ಇದರಿಂದ ಹೆಚ್ಚಾಗಿ ರೋಗಿಗಳು ಪರದಾಡಬೇಕಾಗಿದೆ’ ಎಂದು ಚಿನ್ನಸ್ವಾಮಿ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.