ADVERTISEMENT

ಮಣಭಾರದ ಸಮಸ್ಯೆಗಳಿಂದ ನೊಂದ ಜನ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ವಿಫಲಗೊಂಡ ಪ್ರವಾಸೋದ್ಯಮ

ಕೆ.ಎಸ್.ಗಿರೀಶ್
Published 13 ಏಪ್ರಿಲ್ 2018, 9:46 IST
Last Updated 13 ಏಪ್ರಿಲ್ 2018, 9:46 IST
ಸರ್ಕಟನ್ ಚಾನಲ್‌ನಲ್ಲಿ ಚರಂಡಿ ನೀರು ತುಂಬಿಕೊಂಡಿರುವುದು
ಸರ್ಕಟನ್ ಚಾನಲ್‌ನಲ್ಲಿ ಚರಂಡಿ ನೀರು ತುಂಬಿಕೊಂಡಿರುವುದು   

ಚಾಮರಾಜನಗರ: ಸಕಾಲದಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳು, ನಿಲ್ಲದ ವನ್ಯಜೀವಿ–ಮಾನವ ಸಂಘರ್ಷ, ತುಂಬದ ಕೆರೆಗಳು, ಹೂಳು ತೆಗೆಯದೇ ಬಿಟ್ಟಿರುವ ಕೆರೆಕಟ್ಟೆಗಳು... ಹೀಗೆ  ಹಲವು ಸಮಸ್ಯೆಗಳ ಚಕ್ರವ್ಯೂಹದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮತ್ತೊಂದು ಚುನಾವಣೆಗೆ ಎದುರಾಗುತ್ತಿದೆ.

‘ಕೆರೆಗಳ ನಾಡು’ ಎಂದೇ ಹೆಸರಾಗಿದ್ದ ಯಳಂದೂರಿನಲ್ಲಿ ದಿವಾನ್ ಪೂರ್ಣಯ್ಯಅವರ ಕಾಲದಲ್ಲಿ ನಿರ್ಮಾಣವಾದ ಸಾಕಷ್ಟು ಕೆರೆಗಳು ಈಗಲೂ ಇವೆ. 2,223 ಹೆಕ್ಟೇರ್‌ ಪ್ರದೇಶದಲ್ಲಿ 30 ಕೆರೆಗಳು ಇವೆ. ಆದರೆ, ಇವುಗಳಲ್ಲಿ ಬಹುತೇಕ ಕೆರೆಗಳು ನೀರು ಇಲ್ಲದೇ ಬರಿದಾಗಿವೆ. ಕೆರೆಗಳಿಗೆ ನೀರು ತುಂಬಿಸುವ ಭರವಸೆ ಹಾಗೆಯೇ ಉಳಿದಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲದ ಕೊರತೆ ಎದುರಾಗಿದೆ ಎಂದು ಯಳಂದೂರಿನ ರಾಮಶೆಟ್ಟಿ ದೂರುತ್ತಾರೆ.

ಅತ್ತ ಕೊಳ್ಳೇಗಾಲದ ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲುತ್ತಿಲ್ಲ. ಎಲ್ಲ ಕೆರೆಗಳ ಹೂಳನ್ನು ತೆಗೆಸಬೇಕು ಎಂಬ ಜನರ ಬಹುದಿನದ ಬೇಡಿಕೆ ಇದುವರೆಗೂ ಈಡೇರಿಲ್ಲ.

ADVERTISEMENT

ಕೊಳ್ಳೇಗಾಲದಲ್ಲಿ ಬಹುತೇಕ ಎಲ್ಲ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದು, ಮುಕ್ತಾಯವಾಗುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಚಾಮರಾಜನಗರದಲ್ಲಿದ್ದಂತೆ ದೂಳು ತುಂಬಿದ ವಾತಾವರಣದಿಂದ ರೋಗಿಗಳ ಪ್ರಮಾಣದಲ್ಲಿ ಏರಿಕೆಯಾಯಿತು. ಜನರ ಬದುಕು ಇದರಿಂದ ಮತ್ತಷ್ಟು ಅಸಹನೀಯವಾಗಿದೆ ಎಂದು ನಾಗರಿಕರು ದೂರುತ್ತಾರೆ.

ಇತರ ಕ್ಷೇತ್ರಗಳಿಗೆ ಬಂದಿರುವಂತೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಇಲ್ಲಿ ಇನ್ನೂ ಜಾರಿಯಾಗಿಲ್ಲ. ₹115 ಕೋಟಿ ಮೊತ್ತದ ಯೋಜನೆಯ ಕಾಮಗಾರಿಗಳು ನಡೆಯುತ್ತಿವೆ.

ವನ್ಯಪ್ರಾಣಿಗಳ ಜತೆಗಿನ ಸಂಘರ್ಷಕ್ಕೆ ಅಂತ್ಯ ಹಾಡುವ ಮಾತನ್ನು ಇಲ್ಲಿ ಯಾರೂ ಹೇಳುತ್ತಿಲ್ಲ. ಕಾಡಂಚಿನ ಗ್ರಾಮಗಳ ಜನರು ವನ್ಯಪ್ರಾಣಿಗಳ ದಾಳಿಗೆ ಒಗ್ಗಿ ಹೋಗಿದ್ದಾರೆ. ಆನೆಗಳ ದಾಳಿ, ಕಾಡು ಹಂದಿಗಳ ಕಾಟ ಮೇರೆ ಮೀರಿದರೂ ಜನಪ್ರತಿನಿಧಿಗಳು ಸುಮ್ಮನಿದ್ದಾರೆ ಎಂಬ ಆರೋಪವೂ ಇದೆ.

ಯಳಂದೂರು ಪಟ್ಟಣದಲ್ಲಿ ಒಳಚರಂಡಿ ಅಳವಡಿಕೆ ಕಾರ್ಯ ಆಗಿಲ್ಲ. ಇದರಿಂದ ತೆರೆದ ಮೋರಿಗಳು ಎಲ್ಲೆಡೆ ಇದ್ದು, ಸೊಳ್ಳೆಗಳ ತಾಣವಾಗಿದೆ. ಸುವರ್ಣಾವತಿ ಸೇತುವೆ ಕಾಮಗಾರಿ ಮುಗಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ತಾಲ್ಲೂಕಿಗೊಂದು ಅಗ್ನಿಶಾಮಕ ಠಾಣೆ ಬೇಕು ಎಂಬ ಬೇಡಿಕೆಯೂ ನೆನೆಗುದಿಗೆ ಬಿದ್ದಿದೆ ಎಂದು ಪುಟ್ಟವೀರಪ್ಪ ಹೇಳುತ್ತಾರೆ.

ವೈಫಲ್ಯ ಕಾಣುತ್ತಿರುವ ಪ್ರವಾಸೋದ್ಯಮ: ವಿಶೇಷವಾಗಿ ಈ ಭಾಗದಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಮಲೆಮಹದೇಶ್ವರ ಬೆಟ್ಟ ಹಾಗೂ ದೇವಸ್ಥಾನ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ಹಲವು ಐತಿಹಾಸಿಕ ದೇವಾಲಯಗಳು ಇಲ್ಲಿವೆ. ಹೊಗೇನಕಲ್ ಜಲಪಾತ, ಗಗನಚುಕ್ಕಿ, ಭರಚುಕ್ಕಿ ಜಲಪಾತಗಳೂ ಇಲ್ಲಿವೆ. ಇದರ ಜತೆಗೆ, ಯಳಂದೂರಿನಲ್ಲಿ ಬಳೆಮಂಟಪ, ದಿವಾನ್ ಪೂರ್ಣಯ್ಯ ಬಂಗಲೆ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಸುಂದರವಾದ ಅರಣ್ಯ ಇಲ್ಲಿ ಪರಿಸರಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಇಷ್ಟಾದರೂ ಪ್ರವಾಸೋದ್ಯಮ ಇಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆ.ಎಂ.ಜಾರ್ಜ್ ಬೇಸರ ವ್ಯಕ್ತಪಡಿಸುತ್ತಾರೆ. ಪ್ರವಾಸಿತಾಣದಲ್ಲಿ ಮೂಲಸೌಕರ್ಯಗಳ ಕೊರತೆ, ಪ್ರವಾಸಿಗರಿಗೆ ಮೈಸೂರಿನಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ಇರುವುದು, ಅಂತರ್ಜಾಲದಲ್ಲಿ ನಡೆಯದ ಪ್ರಚಾರದಿಂದ ಪ್ರವಾಸೋದ್ಯಮ ಕಳೆಗುಂದಿದೆ.

ಕೊಳಚೆ ಪ್ರದೇಶ ಹಾಗೇ ಇದೆ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕೊಳಚೆ ಪ್ರದೇಶಗಳು ಸಾಕಷ್ಟು ಸಂಖ್ಯೆಯಲ್ಲಿದೆ. ಇದರಿಂದ ರೋಗರುಜಿನಗಳು ಸಾಮಾನ್ಯ ಎಂಬಂತಾಗಿದೆ. ಈ ಸಮಸ್ಯೆ ನಿವಾರಣೆಗೆ ಯಾರೂ ಸ್ಪಂದಿಸಿಲ್ಲ. ಕೂಗಳತೆ ದೂರದಲ್ಲಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಕಾಲದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ಸಂಚಾರ ವ್ಯವಸ್ಥೆ ಸುಸ್ಥಿತಿಯಲ್ಲಿ ಇಲ್ಲ  – ರಮೇಶ್‌ ಮುರಾರಿ, ಬಿಜೆಪಿ ಕೊಳ್ಳೇಗಾಲ ಟೌನ್ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.