ADVERTISEMENT

ಮಹದೇಶ್ವರ ಬೆಟ್ಟ: ಇಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:20 IST
Last Updated 19 ಫೆಬ್ರುವರಿ 2012, 8:20 IST

ಚಾಮರಾಜನಗರ: ಮಹಾಶಿವರಾತ್ರಿ ಜಾತ್ರೆಯ ಅಂಗವಾಗಿ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆ.19ರಿಂದ 21ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಟ್ಟದ ಬಯಲು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿವೆ. ಫೆ. 19ರಂದು ಸಂಜೆ 5ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಾಲೂರು ಬೃಹನ್ಮಠಾಧ್ಯಕ್ಷ ಪಟ್ಟದ ಗುರು ಸ್ವಾಮೀಜಿ, ಇಮ್ಮಡಿ ಮಹದೇವ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ. ಶಾಸಕ ಆರ್. ನರೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ. ಈಶ್ವರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಮ್ಮ, ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಜಯವಿಭವಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

19ರಂದು ಸಂಜೆ 5.30ರಿಂದ 7ಗಂಟೆವರೆಗೆ ತಿ. ನರಸೀಪುರ ತಾಲ್ಲೂಕಿನ ಯಾಚನಹಳ್ಳಿ ಚನ್ನಾಜಮ್ಮ ಮತ್ತು ತಂಡದಿಂದ ಜಾನಪದ ಗೀತೆ, 7ರಿಂದ 9ಗಂಟೆವರೆಗೆ ಬೆಂಗಳೂರಿನ ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ತಂಡದಿಂದ ಶಿವಾವತರಣ ನೃತ್ಯರೂಪಕ ಏರ್ಪಡಿಸಲಾಗಿದೆ.
 
9ರಿಂದ 10.30ಗಂಟೆವರೆಗೆ ಚಾಮರಾಜನಗರದ ಕಲೆ ನಟರಾಜ್ ಮತ್ತು ತಂಡ ಜಾನಪದ ಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾತ್ರಿ 10.30ಗಂಟೆಗೆ ತಿ. ನರಸೀಪುರ ತಾಲ್ಲೂಕಿನ ನೀಲಸೋಗೆಯ  ಶಿವಮೂರ್ತಿ ಮತ್ತು ಸಂಗಡಿಗರು `ದಕ್ಷಯಜ್ಞ~ ನಾಟಕ ಪ್ರದರ್ಶಿಸಲಿದ್ದಾರೆ.

ಫೆ. 20ರಂದು ಸಂಜೆ 5.30ಗಂಟೆಗೆ ಮಹದೇವಮ್ಮ ಮತ್ತು ತಂಡ ಭಕ್ತಿಗೀತೆ ಹಾಡುವರು. 7ಗಂಟೆಗೆ ಯಳಂದೂರಿನ ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ ಕಲಾವಿದರು ನೃತ್ಯ ಸಂಭ್ರಮ ಕಾರ್ಯ ಕ್ರಮ ನಡೆಸಿಕೊಡಲಿದ್ದಾರೆ. 9ಗಂಟೆಗೆ ಮೈಸೂರಿನ ಗುರುರಾಜ್ ಅವರಿಂದ ಹರಿಕಥೆ ಕಾರ್ಯಕ್ರಮ ಏರ್ಪಡಿಸ ಲಾಗಿದೆ. ರಾತ್ರಿ 10.30 ಗಂಟೆಗೆ ಚಾಮರಾಜನಗರ ತಾಲ್ಲೂಕಿನ ಗಾಳೀಪುರದ ಶ್ರೀಭಕ್ತ ಕನಕದಾಸ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು `ಶಿವಜಲಾಂಧರ~ ಪೌರಾಣಿಕ ನಾಟಕ ಅಭಿನಯಿಸಲಿದ್ದಾರೆ.

ಫೆ. 21ರಂದು ಸಂಜೆ 5.30ಗಂಟೆಗೆ ಯಳಂದೂರಿನ ತಾಲ್ಲೂಕಿನ ವೈ.ಕೆ. ಮೋಳೆ ಗ್ರಾಮದ ದೊಡ್ಡರಂಗಯ್ಯ ಮತ್ತು ತಂಡ ಭಜನೆ ಕಾರ್ಯಕ್ರಮ ನಡೆಸಿಕೊಡಲಿದೆ. 7ಗಂಟೆಗೆ ಮಂಗ ಳೂರಿನ ರಶ್ಮಿ ಚಿದಾನಂದ್ ಅವರು `ಶಿವಲೀಲಾಮೃತಂ~ ನೃತ್ಯರೂಪಕ ಪ್ರಸ್ತುತ ಪಡಿಸಲಿದ್ದಾರೆ. 9ಗಂಟೆಗೆ ಸಿದ್ದಯ್ಯನಪುರದ ಕೈಲಾಸಮೂರ್ತಿ ತಂಡ ತಂಬೂರಿ ಪದ ಹಾಡುವರು.

10.30ಗಂಟೆಗೆ ತಿ. ನರಸೀಪುರ ತಾಲ್ಲೂಕು ಬನ್ನೂರಿನ ದಲಿತ ಸಂಘರ್ಷ ಸಮಿತಿಯ ಕಲಾವಿದರು `ಶನಿಪ್ರಭಾವ~ ಅಥವಾ `ರಾಜಾವಿಕ್ರಮ~ ಎಂಬ ನಾಟಕ ಪ್ರದರ್ಶಿಸಲಿದ್ದಾರೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.