ADVERTISEMENT

ಮಾನವ ಹಕ್ಕುಗಳ ಉಲ್ಲಂಘನೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 9:03 IST
Last Updated 11 ಡಿಸೆಂಬರ್ 2013, 9:03 IST
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ದಿನಾಚರಣೆಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಜಿ. ಸಾವಡಕರ್ ಉದ್ಘಾಟಿಸಿದರು. ಡಿವೈಎಸ್ಪಿ ಮುತ್ತುಸ್ವಾಮಿ ನಾಯ್ಡು, ಎ.ಎಂ. ಕುಂಜಪ್ಪ, ಕೆ.ಎಚ್. ನರಸಿಂಹಮೂರ್ತಿ, ಡಿ. ಭಾರತಿ ಇದ್ದಾರೆ
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ದಿನಾಚರಣೆಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಜಿ. ಸಾವಡಕರ್ ಉದ್ಘಾಟಿಸಿದರು. ಡಿವೈಎಸ್ಪಿ ಮುತ್ತುಸ್ವಾಮಿ ನಾಯ್ಡು, ಎ.ಎಂ. ಕುಂಜಪ್ಪ, ಕೆ.ಎಚ್. ನರಸಿಂಹಮೂರ್ತಿ, ಡಿ. ಭಾರತಿ ಇದ್ದಾರೆ   

ಚಾಮರಾಜನಗರ: ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮೂಲ ಸೌಕರ್ಯ ದೊರೆತರೆ ಮಾನವ ಹಕ್ಕುಗಳ ರಚನೆ ಸಫಲವಾದಂತೆ’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಜಿ. ಸಾವಡಕರ್ ಹೇಳಿದರು.

ನಗರದ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.
ಮೂಲಸೌಕರ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಮಾನವ ಹಕ್ಕುಗಳು ಸದ್ಬಳಕೆ ಯಾಗಬೇಕಾದರೆ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಸಿಗುವಂತಾಗಬೇಕು. ಸಮಾಜದಲ್ಲಿರುವ ಎಲ್ಲರಿಗೂ ಸಮಾನತೆ ಹಾಗೂ ಗೌರವದಿಂದ ಜೀವನ ಸಾಗಿಸುವ ಅವಕಾಶವಿದೆ. ಮೂಲ ಸೌಕರ್ಯ ಸಿಗದಿದ್ದರೆ ಮಾನವ ಹಕ್ಕು ಉಲ್ಲಂಘನೆಯಾದಂತೆ ಎಂದರು.

ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಮಾತನಾಡಿ, ‘ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ಸಾರ್ವಜನಿಕರು ನಿರ್ಭಯವಾಗಿ ದೂರು ದಾಖಲು ಮಾಡಿ ಪರಿಹಾರ ಪಡೆದುಕೊಳ್ಳಬೇಕು. ಮಹಿಳಾ ದೌರ್ಜನ್ಯ, ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನ ಉಪನ್ಯಾಸಕ ಎಸ್. ನಟರಾಜು, ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎಚ್. ನರಸಿಂಹಮೂರ್ತಿ, ಉಪಕಾರ್ಯದರ್ಶಿ ಮುನಿರಾಜಪ್ಪ, ಡಿವೈಎಸ್ ಪಿ ಮುತ್ತು ಸ್ವಾಮಿ ನಾಯ್ಡು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಅಣ್ಣೇಗೌಡ ಹಾಜರಿದ್ದರು.

‘ಅರಿವಿನ ಕೊರತೆಯಿಂದ ಶೋಷಣೆ’
ಕೊಳ್ಳೇಗಾಲ: ಮಾನವ ಹಕ್ಕು ಕುರಿತು ಜನರಲ್ಲಿ ಅರಿವಿನ ಕೊರತೆ ಇರುವುದರಿಂದ ಶೋಷಣೆ ಹೆಚ್ಚುತ್ತಿದೆ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಲಕ್ಷ್ಮಣ್‌ರಾವ್‌ ಮಿಸ್ಕಿನ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಗೀತಾಂಜಲಿ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎಂ. ಪುರುಷೋತ್ತಮ್‌, ಸರ್ಕಾರಿ ವಕೀಲರಾದ ನಾಗೇಶ್‌, ನಾಜೀಮಾ ಬೇಗಂ, ಮಹಮದ್‌ ರಫೀಕ್‌, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ವಕೀಲ ಮಾದಪ್ಪ, ನಾಗರಾಜು, ರಾಧಾಕೃಷ್ಣ, ಮುತ್ತುರಾಜ್‌, ರಾಜೇಂದ್ರ, ಸಿದ್ದರಾಜು, ಉಷಾರಾಣಿ, ನಿರ್ಮಲಾ, ಸಿದ್ದರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.