ADVERTISEMENT

ಮಾರುಕಟ್ಟೆಯಲ್ಲಿ ಪಪ್ಪಾಯಿ ಕಾರುಬಾರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 5:42 IST
Last Updated 10 ಅಕ್ಟೋಬರ್ 2017, 5:42 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಪಪ್ಪಾಯಿ ಹಣ್ಣು.
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಪಪ್ಪಾಯಿ ಹಣ್ಣು.   

ಚಾಮರಾಜನಗರ: ಆರೋಗ್ಯದಾಯಕ ಬಳಕೆಯ ಹಣ್ಣಾಗಿ, ತಂಪು ಪಾನೀಯ ಹಾಗೂ ಐಸ್‌ಕ್ರೀಂಗಳಲ್ಲಿ ಬಳಕೆಯಾಗುವ ಸರ್ವ ಋತು ಬೆಳೆ ಪಪ್ಪಾಯಿಗೆ ಬೇಸಿಗೆಯ ರಣಬಿಸಿಲಿನಲ್ಲಿ ಬೇಡಿಕೆ ಹೆಚ್ಚು. ಆದರೆ, ಜಿಲ್ಲೆಯಲ್ಲಿ ಈಗ ಮಳೆಯ ನಡುವೆಯೂ ಉತ್ತಮ ಮಾರಾಟ ಕಾಣುತ್ತಿದೆ.

ಹಿಂದೆ ಮನೆ ಬಳಕೆಗೆ ಮಾತ್ರ ಬೆಳೆಯುತ್ತಿದ್ದ ಪಪ್ಪಾಯಿ ಈಗ ಅಧಿಕ ಬೇಡಿಕೆ ಇರುವ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಒಂದು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯಗಳಿಸುವ ಬೆಳೆ ಇದಾಗಿರುವುದರಿಂದ ರೈತರು ಸಹಜವಾಗಿಯೇ ಪಪ್ಪಾಯಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.

‘ಜಿಲ್ಲೆಯಲ್ಲಿ 330 ಹೆಕ್ಟೇರ್‌ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ 24,674 ಟನ್ ಇಳುವರಿ ಬರುತ್ತದೆ. ರೇಡ್‌ಲೇಡಿ ಹಾಗೂ ಸೋಲೊ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತಮಿಳುನಾಡು, ಕೇರಳ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಪಪ್ಪಾಯಿ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಮೂಲವ್ಯಾಧಿ, ಚರ್ಮರೋಗ, ಅಜೀರ್ಣ, ಮೂತ್ರಪಿಂಡದ ಸಮಸ್ಯೆ ಮುಂತಾದ ರೋಗಗಳ ಉಪಶಮನಕ್ಕೆ ಮದ್ದಾಗಿ ಬಳಕೆ ಮಾಡಲಾಗುತ್ತದೆ. ವರ್ಷದ ಎಲ್ಲ ಅವಧಿಯೂ ಬೆಳೆಯಬಹುದಾದ ಪಪ್ಪಾಯಿಯಿಂದ ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ.

‘ನಾನು ಹಲವು ವರ್ಷದಿಂದ ಪಪ್ಪಾಯ ಮಾರಾಟ ಮಾಡುತ್ತಿದ್ದೇನೆ. ಪ್ರಸ್ತುತ ಕೆಜಿಗೆ ₹ 20 ರಿಂದ 30ರವರೆಗೂ ಮಾರಾಟವಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ವ್ಯಾಪಾರವಾಗುತ್ತದೆ. ಸದ್ಯ ನಗರದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ವ್ಯಾಪಾರ ಸ್ಪಲ್ಪ ಕಡಿಮೆಯಾಗಿದೆ’ ಎಂದು ಹಣ್ಣಿನ ವ್ಯಾಪಾರಿ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಿನವೊಂದಕ್ಕೆ ₹ 500ರಿಂದ 600 ವ್ಯಾಪಾರ ಮಾಡುತ್ತೇನೆ. ಇಲ್ಲಿಯೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಹಣ್ಣುಗಳನ್ನು ಮಾರಾಟಕ್ಕೆ ತರುತ್ತೇನೆ. ಭಾರಿ ಲಾಭ ದೊರೆಯದಿದ್ದರೂ ಜೀವನ ನಿರ್ವಹಣೆಗೆ ಸಾಕು’ ಎಂದು ಮತ್ತೊಬ್ಬ ಹಣ್ಣಿನ ವ್ಯಾಪಾರಿ ಮಹದೇವಪ್ಪ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.