ADVERTISEMENT

ಮಾರುಕಟ್ಟೆ ಬೇಡಿಕೆ ನೋಡಿ ಬಿತ್ತನೆ ಮಾಡಿ

ಜೆಎಸ್ಎಸ್‌ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಅರುಣ ಬಳಮಟ್ಟಿ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 8:32 IST
Last Updated 22 ಮಾರ್ಚ್ 2018, 8:32 IST

ಚಾಮರಾಜನಗರ: ಇಂದಿಗೂ ಹಲವು ರೈತರು ಮಳೆ ನಕ್ಷತ್ರ ನೋಡಿಯೇ ಬಿತ್ತನೆ ಮಾಡುತ್ತಿದ್ದಾರೆ. ಮಳೆ ನಕ್ಷತ್ರ ನೋಡಿ ಬಿತ್ತನೆ ಮಾಡುವ ಬದಲು ಮಾರುಕಟ್ಟೆಯ ಬೇಡಿಕೆ ನೋಡಿ ಬಿತ್ತನೆ ಮಾಡಬೇಕು ಎಂದು ಸುತ್ತೂರಿನ ಜೆಎಸ್ಎಸ್‌ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಅರುಣಬಳಮಟ್ಟಿ ಹೇಳಿದರು.

ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ‘ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿನ ಸವಾಲುಗಳು’ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ‘ರೈತರ ಆದಾಯ ದ್ವಿಗುಣ– ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಕುರಿತು ಅವರು ಮಾತನಾಡಿದರು.

ಕೃಷಿಗೆ 5 ಸಾವಿರ ವರ್ಷಗಳ ಇತಿಹಾಸವಿದ್ದು, ಅಂದಿನಿಂದ ಯಾವುದೇ ದೊಡ್ಡ ಬದಲಾವಣೆಗಳು ಆಗುತ್ತಿಲ್ಲ. ಕೃಷಿ ಕ್ಷೇತ್ರದಲ್ಲಿ ಬದಲಾವಣೆಯಾದಾಗ ಮಾತ್ರ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯ ಎಂದರು.

ADVERTISEMENT

ಆದರೆ, ಈಚಿನ ದಿನಗಳಲ್ಲಿ ಕೃಷಿಯ ಬಗ್ಗೆ ರೈತರ ಆಸಕ್ತಿ ಕಡಿಮೆಯಾಗುತ್ತಿದೆ. ಪ್ರತಿವರ್ಷ ಗ್ರಾಮದಿಂದ ಶೇ 20ರಷ್ಟು ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಮುಂದುವರಿದರೆ ಮುಂದೊಂದು ದಿನ ಗ್ರಾಮೀಣ ಪ್ರದೇಶದಲ್ಲಿ ಜನರೇ ಇಲ್ಲದಂತಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

2003ರಿಂದ 2013ರವರೆಗೆ ರೈತರ ಮಾಸಿಕ ತಲಾ ಆದಾಯ ₹ 1,000ದಿಂದ 3,800ವರೆಗೆ ಇತ್ತು. ಪ್ರಸ್ತುತ ಇದು 3 ಪಟ್ಟು ಹೆಚ್ಚಳವಾಗಿದೆ. ಆದರೂ ಸಾಧನೆಯಾಗಿಲ್ಲ. ಇದಕ್ಕೆ ಕಾರಣ ಬಿತ್ತನೆಬೀಜ, ರಸಗೊಬ್ಬರ, ಔಷಧಿಯ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಹಾಗಾಗಿ, ರೈತರಿಗೆ ಲಾಭ ದೊರೆಯುತ್ತಿಲ್ಲ ಎಂದರು.

ಕೃಷಿಕರ ಆದಾಯ ಹೆಚ್ಚಳಕ್ಕೆ ವಿಜ್ಞಾನಿಗಳು ಹಾಗೂ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿವೆ. ಇದಕ್ಕೆ ಪೂರಕವಾಗಿ ಹವಾಮಾನವು ಉತ್ತಮವಾಗಿದ್ದು, ಇಳುವರಿಯು ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರೆಯುತ್ತಿಲ್ಲ. ಇದರ ಪರಿಣಾಮದಿಂದ ಹೆಚ್ಚು ಇಳುವರಿ ಪಡೆದರು ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಸ್ರೇಲ್‌ ಮತ್ತು ನೆದರ್‌ಲ್ಯಾಂಡ್‌ ದೇಶದಲ್ಲಿ ಸಂಪನ್ಮೂಲಗಳ ಕೊರತೆ ಇದ್ದರೂ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಇದು ನಮ್ಮ ದೇಶದಲ್ಲೂ ಸಾಧನೆಯಾಗಬೇಕಿದ್ದು, ಯುವಜನರು ಕೃಷಿ ಕ್ಷೇತ್ರದ ಕಡೆಗೆ ಬರಬೇಕು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಪ್ರೊ.ಎಂ. ಮಹದೇವಪ್ಪ ಮಾತನಾಡಿ, ಪ್ರಪಂಚದಲ್ಲಿ ಸುಮಾರು 15 ಲಕ್ಷ ಸಸ್ಯ ತಳಿಗಳಿವೆ. ಭಾರತದಲ್ಲಿ 5ರಿಂದ 6ಲಕ್ಷ ತಳಿಯ ಸಸ್ಯಗಳಿವೆ. ಹೊಸ ತಳಿಗಳ ಆವಿಷ್ಕಾರ ನಡೆಯುತ್ತಿದೆ ಎಂದು ತಿಳಿಸಿದರು.

ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲಾ ಕೇಂದ್ರಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರೈತರು ಕೇಂದ್ರಗಳಗೆ ಭೇಟಿ ನೀಡಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್‌, ನಾಗೇನಹಳ್ಳಿ ಕೃಷಿ ವಿಶ್ವ ವಿದ್ಯಾನಿಲಯ ವಿಸ್ತರಣಾ ಮುಂದಾಳು ಸಿ.ದೊರೆಸ್ವಾಮಿ ಹಾಜರಿದ್ದರು.
**
ಕೇಂದ್ರೀಯ ಕೃಷಿ ವಿವಿ ಸ್ಥಾಪಿಸಿ
ಜಿಲ್ಲಾ ಕೇಂದ್ರದಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭವಾಗಬೇಕು ಎಂದು ಕೃಷಿ ವಿಜ್ಞಾನಿ ಪ್ರೊ.ಎಂ.ಮಹದೇವಪ್ಪ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಕೃಷಿ ವಿಶ್ವ ವಿದ್ಯಾಲಯದ ಅವಶ್ಯಕತೆಯಿದೆ. ಇದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ಕೃಷಿಯಲ್ಲಿ ಹೊಸ ಸಂಶೋಧನೆ ನಡೆಸಲು ಹಾಗೂ ಯುವ ಜನರಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸಿ ಕೃಷಿ ಪುನಶ್ಚೇತನಗೊಳಿಸಲು ಕೃಷಿ ವಿ.ವಿ ಸ್ಥಾಪನೆಯಾಗಬೇಕು. ಪ್ರಾಥಮಿಕ ಹಂತದಲ್ಲಿ ಪಠ್ಯಗಳಲ್ಲಿ ಕೃಷಿಯ ಮಾಹಿತಿ ಅಳವಡಿಸಿ ಮಕ್ಕಳಿಗೆ ಆಸಕ್ತಿ ಮೂಡಿಸುವಂತಾಗಬೇಕು ಎಂದರು.
**
ರೈತರು ಕೃಷಿ ಹೊಂಡದಲ್ಲಿ ಮೀನು ಸಾಕುವುದರಿಂದಲೂ ಉತ್ತಮ ಲಾಭ ಪಡೆಯುವ ಅವಕಾಶವಿದೆ.
–ಅರುಣಬಳಮಟ್ಟಿ, ಮುಖ್ಯಸ್ಥರು, ಜೆಎಸ್ಎಸ್‌ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.