ADVERTISEMENT

ಯಳಂದೂರು: ಹುಲಿಯ ಅಂತ್ಯ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:55 IST
Last Updated 8 ಅಕ್ಟೋಬರ್ 2011, 9:55 IST

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಗಿರಿಧಾಮ ಹುಲಿ ಸಂರಕ್ಷಿತ ತಾಣವಾದ ಬಿಳಿಗಿರಿರಂಗನಬೆಟ್ಟ ಅರಣ್ಯದ `ಬೇತಾಳ ಕಟ್ಟೆ ಬೀಟ್~ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದ ಹುಲಿ ಕಳೇಬರವನ್ನು ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ಮಾಡಲಾಯಿತು.

ಸ್ಥಳಕ್ಕೆ ಅರಣ್ಯ ಜೀವಿ ವಿಭಾಗದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಭೇಟಿ ನೀಡಿದ್ದರು. 5 ರಿಂದ 6 ವರ್ಷ ವಯೋಮಾನದ ಗಂಡು ಹುಲಿಯ ಎಡ ಮುಂಗಾಲಿನಲ್ಲಿ ಗಾಯದ ಗುರುತು ಇದ್ದು, ಬಹುಶಃ ಇದರ ನೋವಿನಿಂದ ನರಳಿ ಸತ್ತಿರುವ ಶಂಕೆ ವ್ಯಕ್ತಪಡಿಸಿದರು. ಬಿಆರ್‌ಟಿ ಹುಲಿ ರಕ್ಷಿತಾ ಅರಣ್ಯ ಪ್ರದೇಶವಾಗಿ ಘೋಷಣೆಯಾದ ನಂತರ ಇಲಾಖೆಯ          ಗಮನಕ್ಕೆ ಬಂದು ಸಂಭವಿಸಿರುವ ಮೊದಲ ಸಾವಿನ ಪ್ರಕರಣ ಇದಾಗಿದೆ.

6 ರಿಂದ 7 ವರ್ಷಗಳ ವರೆಗಿನ ಪ್ರಾಯದ ಹುಲಿ ಇದಾಗಿದೆ. ಸಾವನ್ನಪ್ಪಿ ವಾರ ಕಳೆದಿದೆ. ಇದರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಗುರುಗಳನ್ನು ಯಾರೋ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ. ಸಾವಿನ ಹೆಚ್ಚಿನ ಮಾಹಿತಿಗಾಗಿ ಹೃದಯ, ಕರುಳಿನ ಭಾಗಗಳು, ಜಠರದ ಕೆಲವು ಭಾಗಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಿ ವಾರದೊಳಗೆ ಯಾವುದರಿಂದ ಸತ್ತಿರಬಹುದೆಂಬ ಬಗ್ಗೆ ನಿಖರ ಮಾಹಿತಿ ತಿಳಿಸುವುದಾಗಿ ಸಿಂಗ್ `ಪ್ರಜಾವಾಣಿ~ಗೆ ತಿಳಿಸಿದರು.

ನಂತರ ಇದರ ಕಳೇಬರವನ್ನು ಕಟ್ಟಿಗೆ ಹಾಕಿ ಕಾಡಿನಲ್ಲೇ ದಹಿಸಲಾಯಿತು. ಪಶು ಇಲಾಖೆಯ ವೈದ್ಯಾಧಿಕಾರಿ ಡಾ. ಪ್ರಕಾಶ್ ನೇತೃತ್ವದಲ್ಲಿ ಇದರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಅರಣ್ಯ ಸಂರಕ್ಷಣಾಧಿಕಾರಿ ಶೇಖರ್, ಎಸಿಎಫ್ ಶ್ರೀಧರ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ಬೋರಯ್ಯ, ಮಲ್ಲೇಶ್ ಇತರರು   ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.