ADVERTISEMENT

ರಂಗನಾಥ ದೇಗುಲ: ಪುರಾತನ ವಸ್ತುಗಳ ವಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:32 IST
Last Updated 8 ಜನವರಿ 2014, 6:32 IST

ಕೊಳ್ಳೇಗಾಲ: ಪುರಾತನ ವಿಗ್ರಹಗಳು, ಚಿಲ್ಲರೆ ಹಣ ಸೇರಿದಂತೆ ದೇವಾಲಯಕ್ಕೆ ಭಕ್ತರು ನೀಡಿದ್ದ ಅಪಾರ ವಸ್ತುಗಳನ್ನು ಸೋಮವಾರ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು.

ತಾಲ್ಲೂಕಿನ ಶಿವನಸಮುದ್ರ ಮಧ್ಯರಂಗನಾಥ ದೇವಾಲಯಕ್ಕೆ ಬಹಳ ವರ್ಷಗಳಿಂದಲೂ ಭಕ್ತರು ನೀಡಿದ್ದ ಪುರಾತನ ವಿಗ್ರಹಗಳು ಸೇರಿದಂತೆ ಬೆಳ್ಳಿ, ಸ್ಟೀಲ್‌ ಪಾತ್ರೆಗಳು ಸೇರಿದಂತೆ ಅನೇಕ ವಸ್ತುಗಳು ಅರ್ಚಕರ ವಶದಲ್ಲಿಯೇ ಇದ್ದವು.

ದೇವಾಲಯದ ಆಸ್ತಿಗಳನ್ನು ಪಟ್ಟಿಮಾಡಿ ಪಾರದರ್ಶಕ ವ್ಯವಸ್ಥೆ ಜಾರಿ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಹಲವಾರು ನೋಟೀಸುಗಳನ್ನು ನೀಡಿದ್ದರೂ ಅರ್ಚಕ ಶ್ರೀಧರ್‌ ದೇವಾಲಯಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಹಿಂದಿರುಗಿಸಿರಲಿಲ್ಲ.

ಉಪವಿಭಾಗಾಧಿಕಾರಿ ಸತೀಶ್‌ಬಾಬು ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ದೇವಾಲಯದ ವಸ್ತುಗಳನ್ನು ಸಂಗ್ರಹಿಸಿಡಲಾಗಿದ್ದ ಕೊಠಡಿ ಬೀಗ ತೆಗೆಸಿ ಅಲ್ಲಿದ್ದ ಪುರಾತನ ವಿಗ್ರಹಗಳು ಮತ್ತು ಚಿಲ್ಲರೆ ನಾಣ್ಯ, ಬಟ್ಟೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲಾ ವಸ್ತುಗಳ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿಸಲಾಗಿದೆ.

ಉಪತಹಶೀಲ್ದಾರ್‌ ನಂದಕಿಶೋರ್‌, ರಾಜಸ್ವ ನಿರೀಕ್ಷಕ ಪರಮೇಶ್‌, ಗ್ರಾಮಲೆಕ್ಕಿಗರಾದ ಪ್ರದೀಪ್‌, ಸುಂದರೇಶ್‌,  ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಸುರೇಶ್‌, ರಾಮಚಂದ್ರ, ಜಯರಾಂ, ಗ್ರಾಮದ ಮುಖಂಡರಾದ ಚಿಕ್ಕರಾವಳಿ, ನಂಜುಂಡ, ವೆಂಕಟೇಗೌಡ ಮೈಲಾರಿ, ಸಿದ್ದೇಗೌಡ ಸೀಗನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.