ADVERTISEMENT

‘ರಾಜ್‌ ಕನ್ನಡದ ಸಾಂಸ್ಕೃತಿಕ ರಾಯಭಾರಿ’

ನಟಸಾರ್ವಭೌಮನ ಜನ್ಮದಿನ ಕಾರ್ಯಕ್ರಮ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 8:14 IST
Last Updated 25 ಏಪ್ರಿಲ್ 2018, 8:14 IST
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚಿತ್ರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಉದ್ಘಾಟಿಸಿದರು.
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚಿತ್ರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಉದ್ಘಾಟಿಸಿದರು.   

ಚಾಮರಾಜನಗರ: ‘ನಟನೆ, ಭಾವಾಭಿನಯ, ಗಾಯನ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಮೈಗೂಡಿಸಿಕೊಂಡಿದ್ದ ಮೇರುನಟ ಡಾ.ರಾಜಕುಮಾರ್ ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಚಿತ್ರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆಗಳ ತವರೂರು ಚಾಮರಾಜನಗರ ಜಿಲ್ಲೆಯವರೆ ಆದ ರಾಜ್‍ಕುಮಾರ್ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ನಮ್ಮ ಹೆಮ್ಮೆ ಹಾಗೂ ಅವಿಸ್ಮರಣೀಯ ದಿನವಾಗಿದೆ. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಕಳಕಳಿಯ ಸಂದೇಶದ ಚಲನಚಿತ್ರಗಳಲ್ಲಿ ಸಹಜವಾಗಿ ಅಭಿನಯಿಸುತ್ತಿದ್ದ ರಾಜ್‍ಕುಮಾರ್ ಕಲಾರಸಿಕರೂ ಸೇರಿದಂತೆ ಎಲ್ಲರಲ್ಲೂ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ ಎಂದರು.

ADVERTISEMENT

ಸರಳತೆ, ಸಜ್ಜನಿಕೆ ಹಾಗೂ ಸದ್ಗುಣಗಳನ್ನು ಅಳವಡಿಸಿಕೊಂಡಿದ್ದ ರಾಜಕುಮಾರ್ ಅವರು ಇತರರಿಗೆ ಮಾದರಿಯಾಗಿದ್ದಾರೆ. ಪ್ರತಿಯೊಂದರಲ್ಲೂ ದೇವರನ್ನು ಕಾಣುತ್ತಿದ್ದ ಅವರು ಎಲ್ಲರನ್ನು ಪ್ರೀತಿಸುತ್ತಿದ್ದ ಅಜಾತಶತ್ರುವಾಗಿದ್ದರು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ, ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ರಾಜಕುಮಾರ್ ಅವರು ಸಿನಿಮಾರಂಗದ ಶ್ರೇಷ್ಠ ಸಾಧಕರಾಗಿದ್ದಾರೆ. ಆಧ್ಯಾತ್ಮಿಕ ಹಾಗೂ ಯೋಗಶಕ್ತಿಯ ಮೂಲಕ ನಟನೆಗೆ ಜೀವತುಂಬಿದ ಪರಿಪೂರ್ಣ ಕಲಾತಪಸ್ವಿ. ಅವರ ವಿನಯ, ಸದ್ಗುಣಗಳು ಎಲ್ಲರಿಗೂ ಆದರ್ಶವಾಗಿವೆ ಎಂದರು.

ಚಲನಚಿತ್ರ ಸಾಹಿತಿ ಬಿ.ಎ. ಮಧು ಮಾತನಾಡಿ, ರಾಜ್‍ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ನಟನೆಯ ಜೊತೆಗೆ ಗಾಯಕರಾಗಿ ಇಂದಿಗೂ ಕನ್ನಡದ ಮನೆ-ಮನಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ರಾಜಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದಲ್ಲಿನ ಅಭಿನಯಕ್ಕೆ ಮಾರುಹೋದ ಸಾಕಷ್ಟು ವಿದ್ಯಾವಂತರು ಪಟ್ಟಣದ ಗೀಳು ಬಿಟ್ಟು ಕೃಷಿ ಕಾಯಕಕ್ಕೆ ಮುಂದಾದರು. ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನುಪಡೆದು ಕನ್ನಡದ ಕೀರ್ತಿಯನ್ನುದೇಶದ ಉದ್ದಗಲಕ್ಕೂಪಸರಿಸಿದ್ದಾರೆ. ಅವರ ಸ್ಮರಣೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್ ಹಾಜರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಈಶ್ವರಿ ಸ್ಕೂಲ್ ಆಫ್ ಮ್ಯೂಸಿಕ್ ಅವರಿಂದ ರಾಜಕುಮಾರ್ ಅವರ ಅಭಿನಯದ ಸದಭಿರುಚಿ ಚಿತ್ರಗಳ ಗೀತ ಗಾಯನ ನಡೆಯಿತು.

**
ಯಾವುದೇ ಪಾತ್ರವಾದರೂ ಅದರ ಆಳಕ್ಕಿಳಿದು ಅಭಿನಯಿಸುತ್ತಿದ್ದ <br/>ರಾಜ್‍ಕುಮಾರ್ ಅವರು ದಕ್ಷಿಣಭಾರತದ ಸುಸಂಸ್ಕೃತ ಮೇರುನಟರಾಗಿದ್ದರು
– ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.