ADVERTISEMENT

ರಾಷ್ಟ್ರೀಯ ಥ್ರೋಬಾಲ್‌ ತಂಡಕ್ಕೆ ಸಿದ್ದೇಶ್‌

ಮನು ಶ್ಯಾನುಭೋಗ
Published 21 ಡಿಸೆಂಬರ್ 2013, 9:53 IST
Last Updated 21 ಡಿಸೆಂಬರ್ 2013, 9:53 IST

ಗುಂಡ್ಲುಪೇಟೆ: ತಾಲ್ಲೂಕಿನ ಗ್ರಾಮೀಣ ಪ್ರತಿಭೆ ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಕಾಲೇಜಿನ ವಿದ್ಯಾರ್ಥಿ ಸಿದ್ದೇಶ್‌ ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆಯ ಥ್ರೋ ಬಾಲ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್‌ 19 ರಿಂದ ಮಧ್ಯ ಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಭಾಗವಹಿಸಲಿದ್ದಾರೆ.

ಸಿದ್ದೇಶ್ ತಾಲ್ಲೂಕಿನ ಕೆಲಸೂರು ಗ್ರಾಮದ ವೃತ್ತಿಯಿಂದ ಸೈಕಲ್‌ ರಿಪೇರಿ ಮಾಡುವ ಸಿದ್ದನಾಯಕ ಮತ್ತು ಲಿಂಗರಾಜಮ್ಮ ದಂಪತಿಗಳ ಪುತ್ರ.

ಗುಂಡ್ಲುಪೇಟೆ ಪಟ್ಟಣದ ಶ್ರೀ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಿದ್ದೇಶ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ  ಚಾಮರಾಜನಗರ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದು ಆ  ತಂಡ ಸೆಮಿಫೈನಲ್ ಪ್ರವೇಶಿಸಿತ್ತು.

ಸೈಕಲ್‌ ರಿಪೇರಿ ಮಾಡುವ ತಂದೆ ಸಿದ್ದನಾಯಕ  ಎಸ್.ಎಸ್.ಎಲ್.ಸಿ ಅನುತೀರ್ಣರಾಗಿದ್ದು, ಬೇರಾವುದೇ  ಆದಾಯವಿಲ್ಲದೆ ಮಗನ ಪ್ರತಿಭೆಗೆ ನೀರೆರೆಯಲು ಅಸಹಾಯಕರಾಗಿದ್ದಾರೆ.

ಸಿದ್ದೇಶ್‌ ಜಿಲ್ಲಾ ಮಟ್ಟದ ಡಿಸ್ಕಸ್‌ ಸ್ಪರ್ಧೆಯಲ್ಲಿ ಕಳೆದ ವರ್ಷ ಪ್ರಥಮ ಸ್ಥಾನ ಗಳಿಸಿದ್ದಾನೆ. ಇಂಥಹ ಪ್ರತಿಭೆಗೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಮತ್ತು ಉಪನ್ಯಾಸಕ ಪಿ. ಮಹದೇವಯ್ಯ ಅಗತ್ಯ ಸೌಲಭ್ಯ ಒದಗಿಸುತ್ತಿದ್ದಾರೆ.

ದೈಹಿಕ ಶಿಕ್ಷಕರಿಲ್ಲದೇ ಕ್ರೀಡೆಯಲ್ಲಿ ಸೊರಗಿರುವ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಈ ಸಾಧನೆ ಮೆರೆದಿರುವ ಸಿದ್ದೇಶ್‌ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆತರೆ ಉತ್ತಮ ಕ್ರೀಡಾಪಟುವಾಗಿ ದೇಶವನ್ನು ಪ್ರತಿನಿಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.