ADVERTISEMENT

ಲೋಕಸಭಾ ಚುನಾವಣೆಗೆ ಸಜ್ಜಾಗಿ: ಎಆರ್‌ಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:02 IST
Last Updated 12 ಡಿಸೆಂಬರ್ 2013, 6:02 IST

ಚಾಮರಾಜನಗರ: ‘ಉತ್ತರ ಭಾರತದಲ್ಲಿ ಹೊರಬಿದ್ದಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಪರವಾಗಿದೆ. ಇದು ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸ್ಫೂರ್ತಿ ನೀಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ನಗರದ ವರ್ತಕರ ಭವನದಲ್ಲಿ ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಐದು ರಾಜ್ಯಗಳ ಚುನಾವಣೆಯು ಮೋದಿ ಅವರ ನಾಯಕತ್ವಕ್ಕೆ ಸವಾಲಾಗಿತ್ತು. ಇದನ್ನು ಅಲ್ಲಿನ ಮತದಾರರು ಸಾಬೀತು ಮಾಡಿದ್ದು, ಮೋದಿ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ 4 ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. ಇದಕ್ಕೆ ಪೂರ್ವ ತಯಾರಿಯಂತೆ ಎಲ್ಲ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪಕ್ಷದ ಸಂಘಟನೆಯನ್ನು ಬಲಿಷ್ಠಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ಮೋದಿ ಅವರು ಗುಜರಾತ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ದಾರ್ ವಲ್ಲಭಬಾಯಿ ಪಟೇಲ್‌ ಅವರ ಪ್ರತಿಮೆ ನಿರ್ಮಾಣಕ್ಕೆ ಡಿ. 15 ರಿಂದ ಜ. 26ರವರೆಗೆ ಲೋಹ ಸಂಗ್ರಹ ಅಭಿಯಾನ ನಡೆಯಲಿದೆ. ಇದರ ಯಶಸ್ಸಿಗೆ ಪ್ರತಿಯೊಬ್ಬರು ದುಡಿಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಕಬ್ಬಿಣ ಸಂಗ್ರಹ ಮಾಡಬೇಕು ಎಂದು ಕೋರಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ ಮಾತನಾಡಿ, ಎಲ್ಲ ಮಂಡಲ ಅಧ್ಯಕ್ಷರ ಕಾರ್ಯಕ್ರಮಗಳ ಮಾಹಿತಿ ತೃಪ್ತಿಕರವಾಗಿದೆ. ಕಾಲಹರಣ ಮಾಡದೆ ಪ್ರತಿ ಮನೆಗೆ ತೆರಳಿ ಬಿಜೆಪಿ ಸಾಧನೆ ಹಾಗೂ ಕಾಂಗ್ರೆಸ್‌ನ ವೈಫಲ್ಯದ ಬಗ್ಗೆ ತಿಳಿಸಬೇಕು ಎಂದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ,  ಉಪಾಧ್ಯಕ್ಷ ನಾರಾಯಣಪ್ರಸಾದ್, ಪ್ರಧಾನ ಕಾರ್ಯದರ್ಶಿ ಗಾಯತ್ರಿ, ರಾಜ್ಯ ಪರಿಷತ್ ಸದಸ್ಯ ಗೋಪಾಲ್, ಮುಖಂಡರಾದ ಎಸ್. ಬಾಲಸುಬ್ರಮಣ್ಯ, ಆರ್. ಸುಂದರ್, ರ. ನಾರಾಯಣಗೌಡ,  ಜಯಶೀಲಾ ರಾಜಶೇಖರ್, ಜಿ.ಎಸ್‌. ನಿತ್ಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.