ADVERTISEMENT

`ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ'

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 6:43 IST
Last Updated 6 ಆಗಸ್ಟ್ 2013, 6:43 IST

ಚಾಮರಾಜನಗರ: `ವಿದ್ಯಾರ್ಥಿಗಳು  ಬಾಲ್ಯದಲ್ಲೇ ಎಚ್ಚೆತ್ತುಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ' ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಜಿ.ಸವಡಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾದಾಪುರ ಗ್ರಾಮದ ಸೆಂಟ್ ತೆರೇಸಾ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಿಂದ ಸೋಮವಾರ ನಡೆದ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಾರ್ಯಕ್ರಮ ಆದರೂ ವಿದ್ಯಾರ್ಥಿಗಳಲ್ಲಿ ಅರಿವು ಉಂಟುಮಾಡಿದರೆ ಅದು ಸಫಲವಾಗುತ್ತದೆ ಎಂದ ಅವರು ತಿಳಿಸಿದರು. ದಿನನಿತ್ಯದ ಅರಿವಿಗೆ ಕಾನೂನು ಅವಶ್ಯಕ ಎಂದು ತಿಳಿಸಿದರು. ವಿದ್ಯಾರ್ಥಿಗಳು ಒಳ್ಳೆಯ ನಾಗರೀಕರಾಗಿ ಬೆಳೆಯಬೇಕು ಅನ್ನುವುದೇ ನಮ್ಮ ಉದ್ದೇಶವಾಗಿದೆ, ಆದ್ದರಿಂದ ವಿದ್ಯಾರ್ಥಿಗಳಲ್ಲಿ  ಕಾನೂನು ಅರಿವು ಉಂಟು ಮಾಡುವಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಮಾಜದಲ್ಲಿ ಏನಾದರೂ ಬದಲಾವಣೆಯನ್ನು ಕಾಣಬೇಕಾದರೆ ಮೊದಲು ಗ್ರಾಮ ಮಟ್ಟದಿಂದ ಬದಲಾವಣೆ ಆಗಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಕಾನೂನನ್ನು ಅರಿತು ನಡೆದರೆ ಎಲ್ಲಾ ತೊಂದರೆಗಳು ನಿವಾರಣೆ ಆಗುತ್ತವೆ ಎಂದರು. ಯಾವುದೇ ಕಾನೂನನ್ನು ಅನುಷ್ಠಾನಕ್ಕೆ ತರದೆ ಹೋದರೆ, ಕಾನೂನು ಇದ್ದೂ ಕೂಡ ಪ್ರಯೋಜನವಾಗುವುದಿಲ್ಲ ಎಂದರು.

ಸಮಾಜದಲ್ಲಿ ಆಗುವಂತಹ ಬಾಲ್ಯ ವಿವಾಹ ತಪ್ಪಿಸಲು ವಿದ್ಯೆ ಅವಶ್ಯಕ ಮತ್ತು ವಿದ್ಯಾರ್ಥಿಗಳು ಒಳ್ಳೆಯ ನಾಗರೀಕರಾಗಲು ಕಠಿಣ ಪರಿಶ್ರಮ ಅಗತ್ಯ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ  ಕೆ.ಎಂ. ಶ್ರೀನಿವಾಸಮೂರ್ತಿ ಮಾತನಾಡಿ, `ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಅವಿರತ ಶ್ರಮ ಪಡಬೇಕು ಎಂದು ತಿಳಿಸಿದರು. ದೇಶದ ಅತ್ಯುನ್ನತ ಮಟ್ಟಕ್ಕೆ ಏರಿದವರು ಒಳ್ಳೆಯ ಶಾಲೆಯಲ್ಲಿ ಓದದೇ ಇದ್ದರೂ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸೆಂಟ್ ತೆರೇಸಾ ಪ್ರೌಢಶಾಲೆಯ ವ್ಯವಸ್ಥಾಪಕ ಫಾದರ್ ರೊನಾಲ್ಡ್ ದಾಂತಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರಾದ ಶಿವಸ್ವಾಮಿ, ಎಂ. ರಾಜೇಂದ್ರ, ಮುಖ್ಯ ಶಿಕ್ಷಕ ರಾಯಪ್ಪನ್, ನ್ಯಾಯಾಲಯದ ಸಿಬ್ಬಂದಿ ನಾಗೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.