ADVERTISEMENT

ವಿದ್ಯುತ್ ಹರಿಸಿ ವನ್ಯಜೀವಿ ಹತ್ಯೆಗೆ ಯತ್ನ

3 ಆರೋಪಿಗಳ ಬಂಧನ: ಇಬ್ಬರು ಪರಾರಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 4:42 IST
Last Updated 23 ಜೂನ್ 2013, 4:42 IST

ಚಾಮರಾಜನಗರ: ಕಾಡಂಚಿನ ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗಗಳಿಂದ ಜಿಂಕ್ ವೈರ್ ಬಳಸಿಕೊಂಡು ಅರಣ್ಯದೊಳಗೆ ವಿದ್ಯುತ್ ಹರಿಸಿ ವನ್ಯಜೀವಿಗಳ ಹತ್ಯೆಗೆ ಯತ್ನಿಸುತ್ತಿದ್ದ ಕಳ್ಳಬೇಟೆಗಾರರ ತಂಡದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಮೂಕನಪಾಳ್ಯ ಗ್ರಾಮದ ಶಿವರಾಜು, ಶಂಕರನಾಯ್ಕ, ರವಿನಾಯ್ಕ ಬಂಧಿತರು. ನಾಗನಾಯ್ಕ ಹಾಗೂ ಲಕ್ಷ್ಮಣ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರಿಂದ 700 ಮೀಟರ್ ಜಿಂಕ್ ವೈರ್, ಬ್ಯಾಟರಿ, ಮಚ್ಚು, ಚೂರಿ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ(ಬಿಆರ್‌ಟಿ) ಕೆ. ಗುಡಿ ವಲಯದ ರಾಮಣ್ಣದೊಡ್ಡಿಹಳ್ಳದ ಅರಣ್ಯ ಪ್ರದೇಶದಲ್ಲಿ ಕೃತ್ಯ ಎಸಗುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಾಡಂಚಿನಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ವಿದ್ಯುತ್ ಕಂಬಗಳಿಗೆ ಜಿಂಕ್ ವೈರ್ ಸಂಪರ್ಕ ಕಲ್ಪಿಸುತ್ತಿದ್ದರು. ಬಳಿಕ ಜಿಂಕ್ ವೈರ್ ಅನ್ನು ವನ್ಯಜೀವಿಗಳು ಸಂಚರಿಸುವ ಮಾರ್ಗದಲ್ಲಿ ಹಾಕುತ್ತಿದ್ದರು. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಪ್ರಾಣಿಗಳ ಮಾಂಸ, ಚರ್ಮ ಮಾರಾಟದ ದಂಧೆಯಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಆರೋಪಿ ಶಿವರಾಜು ಮೇಲೆ ಹುಲಿ ಕಳ್ಳಬೇಟೆಯೊಂದರ ಪ್ರಕರಣದಲ್ಲಿ ಭಾಗಿಯಾದ ಆರೋಪವಿದೆ. ರವಿನಾಯ್ಕ ಸಹೋದರ ಮಂಜುನಾಯ್ಕ ಎಂಬಾತ ಕೂಡ ಹುಲಿ ಕಳ್ಳಬೇಟೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಮಧ್ಯರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್.ಎಸ್. ಲಿಂಗರಾಜ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮಾ ಅವರ ಮಾರ್ಗದರ್ಶನದಡಿ ಕೆ. ಗುಡಿ ವಲಯ ಅರಣ್ಯ ಅಧಿಕಾರಿ ಎ.ಎ. ಖಾನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.