ADVERTISEMENT

ವಿಶ್ವೇಶ್ವರಯ್ಯರ ದೂರದೃಷ್ಟಿ ವಿದ್ಯಾರ್ಥಿಗಳಿಗೆ ಮಾದರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 9:25 IST
Last Updated 16 ಸೆಪ್ಟೆಂಬರ್ 2011, 9:25 IST

ಚಾಮರಾಜನಗರ: `ವಿಶ್ವೇಶ್ವರಯ್ಯ ಅವರ ಕಾರ್ಯದಕ್ಷತೆ ಮತ್ತು ದೂರದೃಷ್ಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ~ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ. ಬಾಲಸುಬ್ರಮಣ್ಯಂ ಹೇಳಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಲಯನ್ಸ್ ಸಂಸ್ಥೆ ಹಾಗೂ ಕಾಲೇಜಿನ ಆಶ್ರಯದಡಿ ಹಮ್ಮಿಕೊಂಡಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ 151ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ವಿಶ್ವೇಶ್ವರಯ್ಯ ಅವರು ದೇಶ ಕಂಡ ಶ್ರೇಷ್ಠ ಎಂಜಿನಿಯರ್ ಆಗಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಿರುವುದು ನಮ್ಮೆಲ್ಲರ ಭಾಗ್ಯ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡುವ ಜತೆಗೆ ಪರಿಸರ ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

`ದೇಶಕ್ಕೆ ಭಾರತ ರತ್ನ ವಿಶ್ವೇಶ್ವರಯ್ಯ ಅಪಾರ ಕೊಡುಗೆ ನೀಡಿದ್ದಾರೆ~ ಎಂದು ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಹೇಳಿದರು.

ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿ ರಾಜ್ಯದಲ್ಲಿ ಹಸಿರುಕ್ರಾಂತಿಗೆ ನಾಂದಿ ಹಾಡಿದರು.  ಮೈಸೂರು ದಿವಾನರಾಗಿದ್ದ ವೇಳೆ ಮೈಸೂರು ವಿವಿ ಕೂಡ ಸ್ಥಾಪಿಸಿದರು. ಪ್ರಜಾಪ್ರತಿನಿಧಿ ಸಭೆಯನ್ನು ಬಲಪಡಿಸುವ ಮೂಲಕ ಮೈಸೂರು ಪ್ರಾಂತ್ಯವನ್ನು ಅಭಿವೃದ್ಧಿಪಡಿಸಿದ್ದು ಅವರ ಹೆಗ್ಗಳಿಕೆ ಎಂದರು.

ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರ ಜೀವನ ಚರಿತ್ರೆಯನ್ನು ತಿಳಿಸುವ ವಸ್ತುಪ್ರದರ್ಶನ ನಡೆಯಬೇಕಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅವರ ಸಾಧನೆ ಕುರಿತ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಎಂಜಿನಿಯರ್‌ಗಳಾದ ಸಿ. ಆನಂದ್ ಹಾಗೂ ಉಲ್ಲಾಸ್ ಗೋರೆ ಅವರನ್ನು ಸನ್ಮಾನಿಸಲಾಯಿತು. ಸೆಸ್ಕ್ ಎಂಜಿನಿಯರ್ ವರ್ಗೀಸ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಎಲ್. ಸುರೇಶ್, ಜಂಟಿ ಕಾರ್ಯದರ್ಶಿ ಚೇತನ್, ಪ್ರಾಂಶುಪಾಲ ಡಾ.ಕೆ.ಐ. ಪರಶಿವಮೂರ್ತಿ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.