ಹನೂರು: ಶಾಲಾ ಆವರಣದಲ್ಲಿ ದೇವಸ್ಥಾನಕ್ಕೆ ನಿರ್ಮಾಣಕ್ಕೆ ಅಡಿಪಾಯ ಹಾಕುವ ಮೂಲಕ, ಶಾಲಾ ಚಟುವಟಿಕೆಗೆ ತೊಂದರೆ ಆಗಿರುವ ಸನ್ನಿವೇಶ ಹನೂರು ವ್ಯಾಪ್ತಿಯ ಹುತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದೋಗ ಖಾತ್ರಿ ಯೋಜನೆಯಡಿ ಸುಮಾರು 67 ಮೀಟರ್ ಶಾಲೆಗೆ ಸುತ್ತು ಗೋಡೆ ಯನ್ನು ನಿರ್ಮಿಸುವ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಲಾಗಿದೆ. ಸರ್ಕಾರಿ ಶಾಲಾ ಆವರಣದಲ್ಲಿ ಯಾವುದೇ ದೇವಸ್ಥಾನ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಎಸ್.ಡಿ.ಎಂ.ಸಿ. ಸದಸ್ಯರು ಸಹ ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ. ದೇಗುಲ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಅಥವಾ ಶಾಲೆ ಸಂಬಂಧಪಟ್ಟ ಅಧಿಕಾರಿಗಳು ಅನುಮತಿಯನ್ನು ನೀಡಿಲ್ಲ.
ಹೆಚ್ಚುವರಿ ಕಟ್ಟಡಗಳಿಗೆ ಅನುದಾನ ಬಿಡುಗಡೆಯಾಗಿದ್ದು ಆ ಸ್ಥಳದಲ್ಲಿ ಶೌಚಾಲಯ ಹಾಗೂ ಕಟ್ಟಡಗಳು ನಿರ್ಮಾಣವಾಗುವುದರಿಂದ ಜಾಗದ ಅಭಾವವಿದೆ ಎಂದು ಶಾಲಾ ಮುಖ್ಯಸ್ಥರು ಹೇಳಿದರು. ಯಾವುದೇ ಪ್ರಯೋಜನವಾಗದೇ ಹೋದಾಗ ಅವರು ಹನೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾಗಿ ತಿಳಿಸಿದ್ದಾರೆ.
ಮಾರ್ಚ್ 13 ರಂದು ಶಾಲೆಗೆ ಭೇಟಿ ನೀಡಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಿಗೆ ಕಟ್ಟಡ ಕಾಮಗಾರಿ ಮುಂದುವರಿಸದಂತೆ ಆದೇಶಿಸಿದ್ದು, ಆ ಕಟ್ಟಡ ನಿರ್ಮಾಣಕ್ಕೆ ತಾತ್ಕಲಿಕ ತಡೆ ಬೀಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ದೇಗುಲ ನಿರ್ಮಾಣ ಕುರಿತು ಗ್ರಾಮ ಪಂಚಾಯಿತಿಯಿಂದ ಅನುಮತಿ ನೀಡಿಲ್ಲ, ಶಾಲೆಯ ಅಭಿವೃದ್ಧಿಗೆ ಹಿನ್ನಡೆ ಆಗುವ ಯಾವುದೇ ಕಾರ್ಯಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಈ ವಿಷಯವನ್ನು ತಹಶೀಲ್ದಾರ ಅವರ ಗಮನಕ್ಕೆ ತರುವುದಾಗಿ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆ.
ಸದ್ಯ ಈಗ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಆ ದೇವಸ್ಥಾನದ ಕಟ್ಟಡ ಕಾಮಗಾರಿ ತಾತ್ಕಾಲಿಕವಾಗಿ ನಿಂತಿದ್ದರು ಅಲ್ಲಿನ ವಾತಾವರಣ ಚುನಾವಣೆ ಮುಗಿದ ಮೇಲೆ ಮತ್ತೇಅದು ಶುರುವಾದರೂ ಆಗಬಹುದು. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಅಲ್ಲಿನ ಸಿಬ್ಬಂದಿ ಕೋರಿಕೆ.
ಬಿ. ಬಸವರಾಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.