ADVERTISEMENT

‘ಶಿಕ್ಷಣಕ್ಕೆ ಸುತ್ತೂರು ಸ್ವಾಮೀಜಿ ಕೊಡುಗೆ ಹಿರಿದು’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 5:51 IST
Last Updated 28 ಅಕ್ಟೋಬರ್ 2017, 5:51 IST

ಚಾಮರಾಜನಗರ: ‘ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ರಾಜೇಂದ್ರ ಸ್ವಾಮೀಜಿ ಅವರು ಸಾಮಾಜಿಕ ಬದಲಾವಣೆ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾಪುರುಷರು’ ಎಂದು ಸಹಾಯಕ ಪ್ರಾಧ್ಯಾಪಕ ಎಂ.ಎನ್‌. ನಂದೀಶ್ ಹಂಚೆ ಹೇಳಿದರು.

ತಾಲ್ಲೂಕಿನ ಮರಿಯಾಲ ಗ್ರಾಮದ ಜೆಎಸ್‍ಎಸ್ ಕೈಗಾರಿಕೆ ಸಂಸ್ಥೆ ಮತ್ತು ರುಡ್‌ ಸೆಟ್ ಸಂಸ್ಥೆಯಿಂದ ಗುರುವಾರ ನಡೆದ ರಾಜೇಂದ್ರ ಸ್ವಾಮೀಜಿ ಅವರ 102ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಪಂಡಿತರಾಗ ಬಯಸಿದ್ದ ರಾಜೇಂದ್ರ ಸ್ವಾಮೀಜಿ ಅವರು ಹಿರಿಯ ಸ್ವಾಮೀಜಿ ಸಲಹೆಯಂತೆ ಶಾಲಾ, ಕಾಲೇಜು, ವಿದ್ಯಾರ್ಥಿನಿಲಯ ಸ್ಥಾಪಿಸಿ ಗ್ರಾಮಾಂತರ ಪ್ರದೇಶದ ಬಡಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ನಂಬಿದ್ದರು ಎಂದರು.

ADVERTISEMENT

ಭಾರತ ಸಂಸ್ಕೃತಿ ಪ್ರಧಾನ ದೇಶ. ಸಂಸ್ಕೃತಿ, ಧರ್ಮ ಪಾಲನೆಯಿಂದಲೇ ವಿಶ್ವಪ್ರಸಿದ್ಧಿ ಪಡೆದಿದೆ. ಅದರಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ತಿಳಿಸಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ರಾಜೇಂದ್ರ ಸ್ವಾಮೀಜಿ ಅವರು ಜಾತ್ಯತೀತವಾಗಿ ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ನೀಡಿದರು. ಜಾತಿ ಭೇದ ಮಾಡದೆ ಸಮಾನತೆಗಾಗಿ ಶ್ರಮಿಸಿದ ಮಹಾಪುರುಷರು. ಅವರ ಬದುಕು ಎಲ್ಲರಿಗೂ ದಾರಿ ದೀಪವಾಗಿದೆ ಎಂದು ಹೇಳಿದರು.

ಮುಡುಗುಂಡ ವಿರಕ್ತ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಸಮಾಜದ ಒಳಿತಿಗಾಗಿ ದುಡಿದ ಪುಣ್ಯಪುರುಷರಾದ ಬುದ್ಧ, ಬಸವ, ಅಂಬೇಡ್ಕರ್‌ ಅವರಂತೆ ಆಧುನಿಕ ಯುಗದಲ್ಲಿ ರಾಜೇಂದ್ರ ಸ್ವಾಮೀಜಿ ಕಾಣಿಕೆ ನೀಡಿದ್ದಾರೆ ಎಂದರು.

ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆ.ಎಸ್‍.ಎಸ್ ಕೈಗಾರಿಕೆ ಸಂಸ್ಥೆಯ ಪ್ರಾಚಾರ್ಯ ಬಿ.ಎಸ್. ಈರಪ್ಪಾಜಿ, ರುಡ್‌ ಸೆಟ್ ಸಂಸ್ಥೆಯ ಸಂಯೋಜಕರಾದ ಚಂದ್ರಶೇಖರ್, ಸತೀಶ್, ಅಧ್ಯಕ್ಷ ಮಹದೇವಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.