ADVERTISEMENT

ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಶಾಸಕ ನರೇಂದ್ರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:20 IST
Last Updated 11 ಅಕ್ಟೋಬರ್ 2011, 6:20 IST

ಕೊಳ್ಳೇಗಾಲ: `ಲಂಬಾಣಿ ಜನಾಂಗ ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ~ ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.

ತಾಲ್ಲೂಕಿನ ಮಾರಳ್ಳಿ ಗ್ರಾಮದ ಸರ್ಕಾರಿ ಶಾಲೆ ಕ್ರೀಡಾಂಗಣದಲ್ಲಿ ತಾಲ್ಲೂಕು ಲಂಬಾಣಿ(ಬಂಜಾರರ) ಸಂಘ, ಅಖಿಲ ಕರ್ನಾಟಕ ಲಂಬಾಣಿ ಒಕ್ಕೂಟ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ವಿವಿಧ ಸವಲತ್ತು ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಲಂಬಾಣಿ ನಿಗಮಕ್ಕೆ ಹೆಚ್ಚಿನ ಹಣ ನೀಡುವ ಮೂಲಕ ಲಂಬಾಣಿ ಜನಾಂಗದ ಅಭಿವೃದ್ಧಿಗೆ ಸಹಕಾರ ನೀಡಬೇಕು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಅವರು ಹೇಳಿದರು.

ಹನೂರು ಕ್ಷೇತ್ರದ ಮಾರ್ಟಳ್ಳಿ, ಕೊತ್ತನೂರು, ಬಂಡಳ್ಳಿ, ಹುತ್ತೂರು ಮುಂತಾದ ಗ್ರಾಮಗಳಲ್ಲಿ ವಾಸಿಸುತ್ತಿರುವ 600 ಜನರಿಗೆ ಲಂಬಾಣಿ ಅಭಿವೃದ್ಧಿ ನಿಗಮದ ವತಿಯಿಂದ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಯಿತು. 2009-10ನೇ ಸಾಲಿನ ಅಂಬೇಡ್ಕರ್ ಯೋಜನೆಯಡಿ 40 ಅರ್ಹ ಫಲಾನುಭವಿಗಳಿಗೆ ತಲಾ 10 ಸಾವಿರ ರೂ.ಗಳ ಚೆಕ್ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ. ದೇವರಾಜು, ತಾ.ಪಂ. ಅಧ್ಯಕ್ಷೆ ಶಶಿಕಲಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹಾದೇವಸ್ವಾಮಿ, ಹನೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆಂಪಯ್ಯ, ರಾಮಾಪುರ ಅಧ್ಯಕ್ಷ ಕಾಮರಾಜು, ಕೆ.ಪಿ.ಸಿಸಿ ಸದಸ್ಯ ಬಸವರಾಜು, ರಾಜಪ್ಪ, ರವಿ, ದಿನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿನಾಯ್ಕ, ಶುಭಾಶ್‌ಚಂದ್ರ, ಬಂಜಾರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದುನಾಯ್ಕ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಆರ್. ನರೇಂದ್ರ ಅವರನ್ನು ಹಾಗೂ ಅಧ್ಯಕ್ಷ ಸಿದ್ದುನಾಯ್ಕ ಅವರನ್ನು ಬಂಜಾರ ಜನಾಂಗದ ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.