ಚಾಮರಾಜನಗರ: ಕಲುಷಿತ ನೀರು ಪೂರೈಕೆ ಪರಿಣಾಮ ವಾಂತಿ- ಭೇದಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿರುವ ತಾಲ್ಲೂಕಿನ ಕಾಳನಹುಂಡಿ ಗ್ರಾಮಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಖರೋಲ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಸಿದ್ದಶೆಟ್ಟಿ ಹಾಗೂ ದೊಡ್ಡಮ್ಮ ಎಂಬುವರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಖರೋಲ ಅವರು, ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.
ಗ್ರಾಮದಲ್ಲಿರುವ ಕುಡಿಯುವ ನೀರು ಸರಬರಾಜು ಟ್ಯಾಂಕ್‌ಗಳಿಗೆ ಗುಣಮಟ್ಟದ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಶುದ್ಧೀಕರಿಸಿದ ನೀರು ಪೂರೈಸಬೇಕು. ಮನೆಗಳ ಮುಂಭಾಗ ಹಾಗೂ ಗ್ರಾಮದ ರಸ್ತೆಬದಿಯಲ್ಲಿರುವ ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕು. ನೈರ್ಮಲ್ಯ ಕಾಪಾಡಲು ಒತ್ತು ನೀಡಬೇಕು. ಅಸ್ವಸ್ಥಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, `ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೊರೈಕೆ ಮಾಡಲು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು~ ಎಂದು ಹೇಳಿದರು.
ದೊಡ್ಡಮೂಡಳ್ಳಿಗೆ ಭೇಟಿ: ದೊಡ್ಡಮೂಡಳ್ಳಿಗೆ ಭೇಟಿ ನೀಡಿದ ಖರೋಲ ಅವರು, ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು.`ಕಳೆದ ಎರಡು ದಿನದಿಂದ ಮೂರು ಜಾನುವಾರು ಮೃತಪಟ್ಟಿವೆ. ಇಲ್ಲಿನ ಜಾನುವಾರು ಕಾಡಿನ ಮೇವನ್ನು ಅವಲಂಬಿಸಿದ್ದವು. ಈಗ ಒಣಮೇವು ನೀಡಲಾಗುತ್ತಿದೆ. ಈ ಮೇವಿಗೆ ಜಾನುವಾರು ಹೊಂದಿಕೊಳ್ಳುತ್ತಿಲ್ಲ. ಹೀಗಾಗಿ, ಹೊಟ್ಟೆ ಉಬ್ಬರಕ್ಕೆ ತುತ್ತಾಗಿ ಮೃತಪಟ್ಟಿವೆ~ ಎಂದು ಪಶುವೈದ್ಯರು ವಿವರಿಸಿದರು.
ಖರೋಲ ಮಾತನಾಡಿ, `ಗೋಶಾಲೆಗೆ ಹೆಚ್ಚಿನ ಹಸಿರು ಮೇವು ಸರಬರಾಜು ಮಾಡಬೇಕು. ಗೋಶಾಲೆಯಲ್ಲಿ ಯಾವಾಗಲೂ ಮೇವು ಸಂಗ್ರಹವಾಗಿರುವಂತೆ ಮುಂಜಾಗ್ರತೆವಹಿಸಬೇಕು~ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದೇ ವೇಳೆ ಕೋಳಿಪಾಳ್ಯದಲ್ಲಿಯೂ ಗೋಶಾಲೆ ತೆರೆಯಬೇಕು ಎಂದು ರೈತರು ಮನವಿ ಮಾಡಿದರು.
ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸೂಕ್ತ ಪರಿಹಾರ ನೀಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ರಮೇಶ್‌ಬಾಬು, ತಹಶೀಲ್ದಾರ್ ರಂಗಸ್ವಾಮಯ್ಯ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೈಕೃಷ್ಣ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಣ್ಣ ಇತರರು ಹಾಜರಿದ್ದರು.
ವಿಶ್ವಕರ್ಮ ಪದವೀಧರ ವೇದಿಕೆ ರಚನೆ
ಮೈಸೂರು: ಕರ್ನಾಟಕ ರಾಜ್ಯ ವಿಶ್ವಕರ್ಮ ಪದವೀಧರರ ವೇದಿಕೆಯು ಜಿಲ್ಲಾ ಘಟಕವನ್ನು ರಚಿಸುತ್ತಿದೆ.
ಸಮಿತಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಆಸಕ್ತಿ ಉಳ್ಳವರು ತಮ್ಮ ಸ್ವವಿವರಗಳೊಂದಿಗೆ ನಂ.744, ಕೆ.ಟಿ.ಸ್ಟ್ರೀಟ್, ಮಂಡಿಮೊಹಲ್ಲಾ, ಮೈಸೂರು-21 ಅಥವಾ ಮೊ: 99458 91079 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.