ADVERTISEMENT

ಸಡಗರದ ಹಿಂಡಿಮಾರಮ್ಮ ಜಾತ್ರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 4:46 IST
Last Updated 22 ಅಕ್ಟೋಬರ್ 2017, 4:46 IST

ಯಳಂದೂರು: ತಾಲ್ಲೂಕಿನ ಅಗರ-ಮಾಂಬಳ್ಳಿ ಗ್ರಾಮಗಳಲ್ಲಿ ಶನಿವಾರ ಹಿಂಡಿ ಮಾರಮ್ಮ ಜಾತ್ರೆ ಹಾಗೂ ಕೊಂಡೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ದೀಪಾವಳಿ ನಂತರ ನಡೆಯುವ ಈ ಜಾತ್ರೆಯ ಸಂಭ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಊರ ಮಧ್ಯದ ದೇಗುಲದಲ್ಲಿ ಜಾತ್ರೆಯ ನಿಮಿತ್ತ ವಿಶೇಷ ಪೂಜೆಗಳು ನಡೆದವು. 200ಕ್ಕೂ ಹೆಚ್ಚು ಭಕ್ತರು ಬಾಯಿ ಬೀಗ ಹಾಕಿಕೊಂಡು ಹರಕೆ ಸಲ್ಲಿಸಿದರು. ಇವರು ಅರಿಸಿನ ಕುಂಕುಮ ಲೇಪಿಸಿಕೊಂಡು ಸಾಗುತ್ತಿದ್ದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.

ಕೊಂಡೋತ್ಸವ: ಸಂಜೆ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅಗರದಲ್ಲಿ ಹಾಕಲಾಗಿದ್ದ ಕೊಂಡೋತ್ಸವದಲ್ಲಿ ಭಕ್ತರು ಹಾಯುವ ಮೂಲಕ ಭಕ್ತಿ ಮೆರೆದರು. ಈ ವೇಳೆ ವಾಹನ ಸಂಚಾರ ದಟ್ಟಣೆಯಾದ ಹಿನ್ನೆಲೆಯಲ್ಲಿ ಕೊಳ್ಲೇಗಾಲಕ್ಕೆ ತೆರಳಲು ಮದ್ದೂರು ಗ್ರಾಮದಿಂದ ಆಲ್ಕೆರೆ ಅಗ್ರಹಾರ ಮಾರ್ಗದಿಂದ ಸಂಪರ್ಕ ಕಲ್ಪಿಸಲಾಯಿತು.

ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ದೇಗುಲದ ಆವರಣ ಹಾಗೂ ವಿವಿಧೆಡೆಯಿಂದ ಬಂದಿದ್ದ ವರ್ತಕರು ತಿಂಡಿ, ತಿನಿಸು, ಆಟಿಕೆ ಸಾಮಾನುಗಳ ಮಳಿಗೆಗಳನ್ನು ತೆರೆದಿದ್ದರು. ಮಾಂಬಳ್ಳಿ ಪೊಲೀಸ್ ಠಾಣೆಯ ವತಿಯಿಂದ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.