ADVERTISEMENT

ಸದೃಢ ಭಾರತ ನಿರ್ಮಾಣಕ್ಕೆ ಮೊದಲ ಆದ್ಯತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 7:40 IST
Last Updated 9 ಏಪ್ರಿಲ್ 2012, 7:40 IST

ಯಳಂದೂರು: `ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಸದೃಢ ಭಾರತ ನಿರ್ಮಾಣದ ಗುರಿ ಹೊಂದಿದೆ. ಇದರಲ್ಲಿ ಇರುವರೆಲ್ಲರೂ ರಾಷ್ಟ್ರಪ್ರೇಮಿಗಳೇ ಆಗಿರುವುದರಿಂದ ಇದಕ್ಕೆ ಯಾವುದೇ ರಾಜಕೀಯ ಬೇಕಿಲ್ಲ~ ಎಂದು ಸ್ವಯಂ ಸೇವಕ ಸುಬ್ರಹ್ಮಣ್ಯಭಟ್ ತಿಳಿಸಿದರು.

ಪಟ್ಟಣದ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಪರಿಚಯದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವರು ಸಂಘ ಪರಿವಾರದ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುತ್ತಿದ್ದಾರೆ. ಇದು ಸಜ್ಜನಿಕೆಯಲ್ಲ. ಈ ಸೇವಾ ಸಂಸ್ಥೆಯು ಬಲಿಷ್ಠ ಭಾರತ ನಿರ್ಮಾಣಕ್ಕೆ ಟೊಂಕ ಕಟ್ಟಿದೆಯೇ ವಿನಾ ಯಾರೊಬ್ಬರನ್ನೂ ವಿರೋಧಿಸುವುದಿಲ್ಲ. ಹಿಂದೂಸ್ಥಾನದಲ್ಲಿ ವಾಸಿಸುವ ಯಾವ ಧರ್ಮದವರಾಗಲೀ ಇದರ ಸೇವಕರಾಗಬಹುದು ಎಂದರು.

ಭಾರತದಲ್ಲಿ ಪ್ರಾಕೃತಿಕವಾಗಿಯೇ ರಕ್ಷಣೆ ನೀಡುವ ಸರಹದ್ದುಗಳಿವೆ. ಇದರ ಜೊತೆಗೆ ಆಂತರಿಕವಾಗಿ ಇರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಕೆಲಸಕ್ಕೆ, ರಾಷ್ಟ್ರರಕ್ಷಣೆಗೆ ಸಂಸ್ಥೆಯ ಸೇವಕರು ಕಂಕಣಬದ್ಧರಾಗಿ ನಿಲ್ಲಬೇಕು. ಇದಕ್ಕಾಗಿ ಸಂಸ್ಥೆಗೆ ಶಾಖೆಗಳನ್ನು ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿಸುವ ಜವಾಬ್ಧಾರಿ ಇದೆ. ಈ ಮೂಲಕ ಪರಿವಾರಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕಿದೆ ಎಂದರು.

ಸಚ್ಚಾರಿತ್ರ್ಯವುಳ್ಳ ಸಂಘಟನೆಗಳಿಗೆ ಸುಸಂಸ್ಕ್ರತ, ಸುಶೀಲ, ಸುಸಂಘಟಿತ, ಸಕ್ರೀಯ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿಗೆ ಸೇವಕ ರಾಗಲು ಬರುವವರಿಗೆ ಯಾವುದೇ ಜಾತಿ, ವೃತ್ತಿ, ವಯಸ್ಸು, ಹಣದ ಅವಶ್ಯಕತೆ ಇಲ್ಲ. ತಾನು ಒಬ್ಬ ಹಿಂದೂ ಎಂಬ ವಿಶಾಲ ಮನೋಭಾವದವರು ಸೇರಿಕೊಳ್ಳಬಹುದು ಎಂದು ತಿಳಿಸಿದರು.

ಸಂಘದ ಮತ್ತೊಬ್ಬ ಸ್ವಯಂ ಸೇವಕ ಮಾದಪ್ಪ ಮಾತನಾಡಿದರು. ಇದೇ ವೇಳೆ ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಯಂಸೇವಕರು ಪಥ ಸಂಚಲನ ನಡೆಸಿದರು. ನಂತರ ಕಾಲೇಜಿನ ಆವರಣದಲ್ಲಿ ಸೂರ್ಯ ನಮಸ್ಕಾರ ಹಾಗೂ ಇತರೆ ಚಟುವಟಿಕೆ ನಡೆದವು.

ಶಾಸಕ ಜಿ.ಎನ್. ನಂಜುಂಡಸ್ವಾಮಿ, ವಿಧಾನಪರಿಷತ್ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ಪರಿವಾರದ ವಾಮನ್‌ರಾವ್‌ಬಾಪಟ್,  ಬಸವ ರಾಜಪ್ಪ, ವೆಂಕಟರಾಮು, ಡಿ.ಪಿ. ಶಿವಕುಮಾರ್, ತಾ.ಪಂ. ಸದಸ್ಯ ಕೆ.ಪಿ. ಶಿವಣ್ಣ, ಕೆ.ಪಿ. ಮಹಾದೇವಸ್ವಾಮಿ, ಸರ್ವೇಶ್, ಆರ್.ಗೋಪಾಲ್, ನಾಗರಾಜು, ಗೋವಿಂದರಾಜು, ಚೈತ್ರಮಣಿ ಇತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.