ADVERTISEMENT

ಸಭೆ: ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ

ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 7:06 IST
Last Updated 2 ಏಪ್ರಿಲ್ 2018, 7:06 IST

ಚಾಮರಾಜನಗರ: ‘ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಹಾಗೂ ಪಕ್ಷಗಳಿಗೆ ಅವಶ್ಯವಿರುವ ಸಾರ್ವಜನಿಕ ಸಭೆ, ಸಮಾರಂಭ ನಡೆಸಲು ಹಾಗೂ ವಾಹನ ಇತರೇ ಪರಿಕರಗಳ ಬಳಕೆಗೆ ಅನುಮತಿ ನೀಡಲು ಒಂದೇ ಸೂರಿನಡಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಪ್ರಚಾರ, ಸಾಮಗ್ರಿ ದರ ನಿಗದಿ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ಸಭೆ, ಸಮಾರಂಭ, ಧ್ವನಿವರ್ಧಕ, ಹೆಲಿಪ್ಯಾಡ್, ವಾಹನ ಬಳಕೆ ಇತರೇ ಪ್ರಮುಖ ವಿಷಯಗಳಿಗೆ ಅನುಮತಿ ಪಡೆಯಲು ಏಕ ಗವಾಕ್ಷಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಒಂದೇ ಸೂರಿನಡಿ ವಿಳಂಬಕ್ಕೆ ಅವಕಾಶವಾಗದಂತೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದರು.

ಚುನಾವಣಾ ಆಯೋಗ ಚುನಾವಣೆಗೆ ಅಭ್ಯರ್ಥಿಯ ಖರ್ಚು ಮಾಡುವ ವೆಚ್ಚವನ್ನು ₹ 28 ಲಕ್ಷಕ್ಕೆ ಮಿತಿಗೊಳಿಸಿದೆ. ಪ್ರತಿ ಖರ್ಚನ್ನು ವೆಚ್ಚಕ್ಕೆ ತೆಗೆದುಕೊಳ್ಳಲಾಗುತ್ತದೆ. ಪಾರದರ್ಶಕವಾಗಿ ಎಲ್ಲವನ್ನೂ ದಾಖಲು ಮಾಡಲಾಗುತ್ತದೆ ಮಾದರಿ ನೀತಿ ಸಂಹಿತೆಯು ಚುನಾವಣೆ ಘೋಷಣೆ ಮಾಡಿದ ಸಮಯದಿಂದಲೇ ಜಾರಿಯಲ್ಲಿದೆ. ಯಾವುದೇ ಉಲ್ಲಂಘನೆಗೆ ಅವಕಾಶವಾಗದಿರಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.ಚುನಾವಣಾ ಪ್ರಚಾರಕ್ಕೆ ಬಳಸುವ ವಸ್ತುಗಳಿಗೆ ಮಾರುಕಟ್ಟೆ ದರ ನಿಗದಿ ಮಾಡಲಾಗಿದೆ. ಈ ಸಂಬಂಧ ಚರ್ಚಿಸಿ ನಿಯಮಾನುಸಾರ ದರ ನಿಗದಿ ಮಾಡಲಾಗುತ್ತದೆ. ವಾಹನ, ಶಾಮಿಯಾನ, ಇನ್ನಿತರ ಪ್ರಚಾರ ಸಾಮಗ್ರಿಗಳಿಗೆ ಇರುವ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ, ಎಲ್ಲ ಮತಗಟ್ಟೆಗಳಿಗೆ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಚುನಾವಣಾ ಆಯೋಗವು ಸಹ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಬಗ್ಗೆ ಖಾತರಿಪಡಿಸುವಂತೆ ತಿಳಿಸಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ ಮಾತನಾಡಿ, ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿ ಕ್ರಮ ವಹಿಸಲಾಗಿದೆ. ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಟ್ಟು ತಡೆಯಲು ವಿವಿಧ ತಂಡಗಳನ್ನು ರಚಿಸಲಾಗಿದೆ. 19 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣೆ ಸಂಬಂಧ ರ‍್ಯಾಲಿ, ರೋಡ್ ಶೋ, ಧ್ವನಿವರ್ಧಕ ಬಳಕೆಗೆ ನಿಯಮಾನುಸಾರ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನಮ್‌, ಚುನಾವಣಾಧಿಕಾರಿಗಳಾದ ಸತೀಶ್, ಮರುಳೇಶ್, ನೋಡೆಲ್ ಅಧಿಕಾರಿಗಳಾದ ತಿರುಮಲೇಶ್, ಬಸವರಾಜು, ಮುಖಂಡರಾದ ಮರಿಸ್ವಾಮಿ, ಸೈಯದ್ ರಫಿ, ಪರಶಿವಮೂರ್ತಿ, ಸಿ.ಎಂ.ಕೃಷ್ಣಮೂರ್ತಿ, ಚಿನ್ನಸ್ವಾಮಿ, ನಾಗೇಶ್‌ನಾಯ್ಕ, ಎಸ್.ರಾಮಚಂದ್ರ, ಸೈಯದ್ ಇದ್ರೀಶ್, ಬ್ಯಾಡಮೂಡ್ಲು ಬಸವಣ್ಣ, ಡಿ.ಎನ್.ಉಷಾ, ನಹೀಮ್ ಉಲ್ಲಾ ಷರೀಫ್ ಹಾಜರಿದ್ದರು.

**

ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಎಲ್ಲರು ಪಾಲನೆ ಮಾಡುವ ಜತೆಗೆ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಬೇಕು – ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.