ADVERTISEMENT

ಸಮಸ್ಯೆಗಳನ್ನು ಹೊತ್ತು ಮಲಗಿರುವ ಮೆಳ್ಳಹಳ್ಳಿ

ಪ್ರಜಾವಾಣಿ ವಿಶೇಷ
Published 5 ಜನವರಿ 2012, 7:00 IST
Last Updated 5 ಜನವರಿ 2012, 7:00 IST

ಯಳಂದೂರು: ಪ್ರಮುಖ ರಸ್ತೆಗಳ ಬದಿ ಹೂಳು ತುಂಬಿದ ಚರಂಡಿ, ಹಳ್ಳಕೊಳ್ಳಗಳಿಂದ ಕೂಡಿದ ಬೀದಿಗಳ ಮಣ್ಣಿನ ರಸ್ತೆ, ಕೇವಲ ಸ್ಮಾರಕಗಳಾಗಿರುವ ನೀರಿನ ತೊಂಬೆಗಳು, ಕೈಪಂಪಿನಿಂದ ನೀರನ್ನು ತೆಗೆಯಲು ಹರ ಸಾಹಸ ಪಡುವ ಮಹಿಳೆಯರು...

ಹೌದು ಇದು ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದ ಪ್ರಮುಖ ಸಮಸ್ಯೆಗಳು. ಗ್ರಾಮದಲ್ಲಿ 6 ನೀರಿನ ತೊಂಬೆಗಳಿವೆ. ಇದರಲ್ಲಿ ಬಹುತೇಕ ಕೇವಲ ಸ್ಮಾರಕಗಳಾಗಿ ನಿಂತಿವೆ. ಆದರೆ ಪಕ್ಕದ ಗ್ರಾಮವಾದ ದುಗ್ಗಹಟ್ಟಿ ಗ್ರಾಮದ ಓವರ್ ಹೆಡ್ ಟ್ಯಾಂಕಿನಿಂದ ಮಾತ್ರ ಇಲ್ಲಿಗೆ ಪೂರೈಕೆಯಗುವ ನೀರನ್ನೇ ನೆಚ್ಚಿಕೊಂಡು ಇರಬೇಕಾದ ಸ್ಥಿತಿ ಇಲ್ಲಿನ ಸಾರ್ವಜನಿಕರದ್ದು.

ಅಂಬೇಡ್ಕರ್ ಬಡಾವಣೆಯಲ್ಲಿರುವ ಕೈಂಪಿನಲ್ಲಿ ನೀರು ಬರಬೇಕಾದರೆ ಹರಸಾಹಸ ಪಡಬೇಕು ಎಂಬುದು ಇಲ್ಲಿನ ನಾಗರಿಕರ ದೂರು. ಗ್ರಾಮದ ಪ್ರಮುಖ ಚರಂಡಿಯ ಸುತ್ತ ಮುತ್ತ ಗಿಡಗಂಟಿಗಳು ಬೆಳೆದಿವೆ. ತಿಂಗಳು ಕಳೆದರೂ ಇದರ ಹೂಳೆತ್ತಿಲ್ಲ. ರಸ್ತೆಯು ಎತ್ತರವಾಗಿರುವುದರಿಂದ ಮಳೆಗಾಲದಲ್ಲಿ ಚರಂಡಿಯ ಕಲುಷಿತ ನೀರು ಮನೆಗಳಿಗೆ ನುಗ್ಗುತ್ತದೆ. ಇದನ್ನು ಎತ್ತರಿಸಬೇಕು ಎಂದು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವರಿಕೆ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಕೃಷ್ಣಯ್ಯ ದೂರುತ್ತಾರೆ.

ಗ್ರಾಮದ ಬಹುತೇಕ ರಸ್ತೆಗಳಲ್ಲಿ ಮಣ್ಣನ್ನು ಸುರಿಯಲಾಗಿದೆ. ಕೆಲವು ಬೀದಿಗಳಿಗೆ ಈ ಸೌಲಭ್ಯವೂ ಇಲ್ಲದಿರುವುದರಿಂದ ವಾಹನಗಳು ಚಲಿಸುವುದು ಹಾಗೂ ಪಾದಚಾರಿಗಳು ಓಡಾಡಲೂ ತುಂಬಾ ತೊಂದರೆಯಾಗಿದೆ. ಗ್ರಾಮಕ್ಕೆ ಕುಡಿಯುವ ನೀರಿಗೆ ಪ್ರತ್ಯೇಕ ಬೋರ್‌ವೆಲ್ ಹಾಕಿಸಲಾಗಿದ್ದರೂ ಇದಕ್ಕೆ ನೀರಿನ ಸಂಪರ್ಕ ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂಬುದಾಗಿ ಗ್ರಾಮದ ಲಿಂಗರಾಜು, ರಂಗಯ್ಯ, ಮಹೇಶ್ ದೂರುತ್ತಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳ ಬಗ್ಗೆ ಈಗಲಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಂಡು ಗ್ರಾಮದ ಸಮಸ್ಯೆಗಳಿಗೆ ಇತಿಶ್ರೀ ಹಾಡುವರೇ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.