ADVERTISEMENT

ಸಮಸ್ಯೆ ಪರಿಹಾರಕ್ಕೆ ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 10:05 IST
Last Updated 27 ಫೆಬ್ರುವರಿ 2011, 10:05 IST

ಚಾಮರಾಜನಗರ: ‘ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಗಮನಕ್ಕೆ ತರುವ ಸಮಸ್ಯೆಗಳನ್ನು ಒಂದು ವಾರದೊಳಗೆ ಪರಿಹರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಟಿ. ಚಂದ್ರಶೇಖರ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇದೊಂದು ಪ್ರಶ್ನೋತ್ತರ ಕಾರ್ಯಕ್ರಮವಾಗಬಾರದು. ನೈಜ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಹಿಂದಿನ ಕಾರ್ಯಕ್ರಮದಲ್ಲಿ 42 ದೂರವಾಣಿ ಕರೆ ಸ್ವೀಕರಿಸಲಾಗಿತ್ತು. ಅವುಗಳಲ್ಲಿ ಕೆಲವು ಸಮಸ್ಯೆ ನಿವಾರಣೆ ಕಂಡಿಲ್ಲ. ಅನುಪಾಲನಾ ವರದಿಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಷ್ಟವಾಗಿ ವಿವರಣೆ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧವಾ ವೇತನ, ಸಂಧ್ಯಾ ಸುರಕ್ಷಾ, ಬೆಳೆ ವಿಮೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಮಸ್ಯೆ ಮುಂದಿಡುತ್ತಾರೆ. ಇಂಥ ಸಮಸ್ಯೆ ಬಗೆಹರಿಸುವುದು ಅಧಿಕಾರಿಗಳ ಜವಾಬ್ದಾರಿ. ನಿರ್ಲಕ್ಷ್ಯವಹಿಸುವುದು ಸರಿಯಲ್ಲ ಎಂದರು. 

 18ವರ್ಷ ಮೇಲ್ಪಟ್ಟ ಗಂಡು ಮಕ್ಕಳಿದ್ದರೂ ವಿಧವೆಯರಿಗೆ ಆಸರೆಯಾಗಿಲ್ಲದಿದ್ದರೆ ವಿಧವಾ ವೇತನ ನೀಡಬೇಕು. ಈ ಬಗ್ಗೆ ಸರ್ಕಾರವೇ ಆದೇಶ ನೀಡಿದೆ. ಆದರೆ, ಯಳಂದೂರು ತಾಲ್ಲೂಕಿನಲ್ಲಿ ಈ ನೀತಿ ಜಾರಿಗೊಂಡಿಲ್ಲ. ಕೂಡಲೇ, ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸಮಾಜ ಸೇವಕ ಆರ್.ರಂಗಸ್ವಾಮಿ ಗಮನ ಸೆಳೆದರು.

ಸಿದ್ದಯ್ಯನಪುರ- ಹೊಂಗಲವಾಡಿ ಗ್ರಾಮದ ನಡುವೆ ಸುವರ್ಣಾವತಿ ನದಿ ಹರಿಯುತ್ತಿದೆ. ಮಳೆಗಾಲದಲ್ಲಿ ನೀರು ಹರಿಯುವುದರಿಂದ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರ ಸಂಚಾರಕ್ಕೆ ಕಷ್ಟವಾಗಿದೆ. ಕೂಡಲೇ, ಸೇತುವೆ ನಿರ್ಮಿಸಬೇಕು ಎಂದು ಹೊಂಗಲವಾಡಿಯ ಶ್ರೀನಿವಾಸ್‌ಪ್ರಸಾದ್ ಮನವಿ ಮಾಡಿದರು.

‘ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸೇತುವೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದು ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಒಟ್ಟು 21 ದೂರವಾಣಿ ಕರೆ ಸ್ವೀಕರಿಸಲಾಯಿತು. ಜಿಪಂ ಸಿಇಓ ಕೆ. ಸುಂದರನಾಯಕ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.