ಚಾಮರಾಜನಗರ: ‘ಮಹಿಳೆಯರಿಂದ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸವಾಗಬೇಕಿದೆ. ಆಗ ಮಾತ್ರ ಸಾಮರಸ್ಯ ಸಾಧಿಸಲು ಸಾಧ್ಯ’ ನಗರಸಭೆ ಪೌರಾಯುಕ್ತ ಬಿ. ಕೃಷ್ಣಪ್ಪ ಹೇಳಿದರು. ನಗರದಲ್ಲಿ ಶುಕ್ರವಾರ ನಗರಸಭೆಯಿಂದ ನಡೆದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆಧುನಿಕ ಯುಗದಲ್ಲಿ ಮಹಿಳೆಯರು ಜಾಗೃತರಾಗಿದ್ದಾರೆ. ಪುರುಷರಿಗೆ ಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಮನೆಗೆ ಸೀಮಿತವಾಗಿಲ್ಲ. ಗಗನಯಾತ್ರಿಯಾಗಿ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲೂ ಹೆಜ್ಜೆ ಮೂಡಿಸಿದ್ದಾರೆ. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಶೋಷಣೆ ಎದುರಿಸುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ’ ಎಂದು ಕರೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಸೆಲ್ವಿಬಾಬು ಮಾತನಾಡಿ, ಮಹಿಳೆಯರಿಗೆ ಮಹಿಳೆಯರೇ ಶತ್ರುಗಳಾಗಿದ್ದಾರೆ. ಭ್ರೂಣಹತ್ಯೆಯಂಥ ಕೃತ್ಯಕ್ಕೆ ಅವಕಾಶ ನೀಡಬಾರದು. ಉನ್ನತ ಶಿಕ್ಷಣ ಪಡೆದರೆ ಸಮಾಜದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗಲಿದೆ. ಬಾಲ್ಯವಿವಾಹದಂಥ ಅನಿಷ್ಟ ಪದ್ಧತಿ ತೊಲಗಿಸಲು ಪಣತೊಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಕೆ. ರಾಧಾ ಮಾತನಾಡಿ, ಮಹಿಳಾ ಕಾರ್ಯಕ್ರಮಗಳು ಒಂದು ದಿನಕ್ಕೆ ಸೀಮಿತವಾಗಬಾರದು. ನಿರಂತರವಾಗಿ ನಡೆಯಬೇಕಿದೆ ಎಂದರು. ‘ಮಹಿಳೆ ಇಂದು ಜಾಗೃತಿಯ ಹಾದಿಯಲ್ಲಿದ್ದಾಳೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಾಲೇಜುಗಳು ಪ್ರಾರಂಭವಾಗುತ್ತಿವೆ. ಹೀಗಾಗಿ, ಹೆಣ್ಣುಮಕ್ಕಳು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿಲ್ಲ. ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಮಾಜದಲ್ಲಿ ತಾರತಮ್ಯ ಕೂಡ ಕಡಿಮೆಯಾಗುತ್ತಿದೆ’ ಎಂದು ಜೆಎಸ್‌ಎಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ರಾಜಶೇಖರ ಜಮದಂಡಿ ಹೇಳಿದರು.
ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ನಾಗಶ್ರೀ ಪ್ರತಾಪ್, ಎಸ್‌ಜೆಎಸ್‌ಆರ್‌ವೈ ಅಧ್ಯಕ್ಷೆ ಹೇಮಾವತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಂಜಾದ್ ಪಾಷಾ, ಡಾ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.