ADVERTISEMENT

ಸರ್ವೆ ಇಲಾಖೆ ಕಡತ ವಿಲೇವಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:00 IST
Last Updated 13 ಜುಲೈ 2012, 9:00 IST

ಕೊಳ್ಳೇಗಾಲ: ಹನೂರು ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಸರ್ವೆ ಇಲಾಖೆಗೆ ಸಂಬಂಧಿಸಿದ 100 ಕಡತಗಳು 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ತಮಿಳು ಜನರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅರಸಪ್ಪನ್ ಎಚ್ಚರಿಸಿದ್ದರು.

ತಾಲ್ಲೂಕಿನ ಹನೂರು ವಿಶೇಷ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಮಿಳು ಜನರ ಹಿತರಕ್ಷಣಾವೇದಿಕೆ, ಎಚ್.ಡಿ.ಕುಮಾರಸ್ವಾಮಿ ಬಳಗ ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ಗುರುವಾರ ತಾಲ್ಲೂಕು ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹನೂರಿನಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಆರಂಭವಾಗಿ 8 ವರ್ಷಗಳೇ ಕಳೆದಿವೆ. ಹನೂರು, ಲೊಕ್ಕನಹಳ್ಳಿ ಹಾಗೂ ರಾಮಾಪುರ ಹೋಬಳಿ ಈ ಕಚೇರಿಯ ವ್ಯಾಪ್ತಿಯಲ್ಲಿ ಬರುತ್ತವೆ. ರೈತರು ತಮ್ಮ ಭೂಮಿ ಅಳತೆ ಪೋಡಿ, ಹದ್ದುಬಸ್ತು ಸೇರಿದಂತೆ ಇತರೆ ಸರ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ತಾಲ್ಲೂಕು ಕಚೇರಿಗೆ ಹೋಗಬೇಕಾದ ಸ್ಥಿತಿ ಇದೆ.

ಸರ್ವೆಗೆ ಸಂಬಂಧಿಸಿದಂತೆ ಸೂಪರ್‌ವೈಸರ್‌ಗಳನ್ನು ನೇಮಿಸಿ, ಸರ್ವೆ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ಹನೂರಿನಲ್ಲಿಯೇ ಇಡಬೇಕು. ಇಲ್ಲಿಂದಲೇ ರೈತರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮೂರು ಹೋಬಳಿಗಳ ನೂರಾರು ಕಡತಗಳು ವಿಲೇವಾರಿಯಾಗದೆ ನೆನೆಗುದಿಗೆ ಬಿದ್ದಿದೆ. ಈ ಕಡತಗಳನ್ನು ತಿಂಗಳೊಳಗೆ ವಿಲೇವಾರಿ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾಧಿಕಾರಿ ಕಚೇರಿ ಎದುರು 3 ಹೋಬಳಿಗಳ ರೈತರು, ರೈತ ಸಂಘಟನೆಗಳು, ಹಾಗೂ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಕರ್ನಾಟಕ ತಮಿಳು ಜನರ ಹಿತರಕ್ಷಣಾ ಸಮಿತಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮಾದಪ್ಪ, ಸದಸ್ಯ ಸುಬ್ರಹ್ಮಣಿ, ರಾಮಸ್ವಾಮಿ, ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗ ಅಧ್ಯಕ್ಷ ಲಿಂಗರಾಜು, ಕಾರ್ಯಾಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಮುತ್ತುರಾಜ್, ರೈತ ಮುಖಂಡ ನಾಗೇಂದ್ರ ಶಂಕರೇಗೌಡ, ಲಿಂಗರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.