ADVERTISEMENT

ಸಹಜ ಸ್ಥಿತಿಗೆ ಬಾರದ ಅಂಚೆ ವಹಿವಾಟು

ಮುಂದುವರಿದ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 13:34 IST
Last Updated 30 ಮೇ 2018, 13:34 IST

ಚಾಮರಾಜನಗರ: ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಅಂಚೆ ವಹಿವಾಟು ಸ್ಥಗಿತಗೊಂಡಿದೆ. ರೈತಾಪಿ ಜನರು, ವೃದ್ಧರು, ಅಂಗವಿಕಲರು ಇದರಿಂದ ಪರದಾಡುವಂತಾಗಿದೆ.

ಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಜಿಲ್ಲೆಯ 500ಕ್ಕೂ ಹೆಚ್ಚಿನ ನೌಕರರು ಇದರಲ್ಲಿ ಭಾಗಿಯಾಗಿದ್ದಾರೆ.

ಪ್ರತಿಭಟನೆಯಿಂದ ಗ್ರಾಮೀಣ ಭಾಗಗಳಲ್ಲಿ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಾಶನ ದೊರೆಯುತ್ತಿಲ್ಲ. ಪತ್ರಗಳ ವಿಲೇವಾರಿಯೂ ನಡೆಯುತ್ತಿಲ್ಲ. ಬೀಗ ಹಾಕಿದ ಅಂಚೆ ಕಚೇರಿಗಳೇ ಎಲ್ಲ ಗ್ರಾಮಗಳಲ್ಲೂ ಕಾಣಿಸುತ್ತಿವೆ. ವಿವಿಧ ಉಳಿತಾಯ ಯೋಜನೆಗಳಡಿ ಹಣ ಸಂಗ್ರಹ ಕಾರ್ಯ ನಿಂತಿದೆ.

ADVERTISEMENT

ನಗರದ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಧರಣಿ ನಡೆಸುತ್ತಿರುವ ನೌಕರರು ಸರ್ಕಾರದ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದೀಗ ಇವರ ಪ್ರತಿಭಟನೆ ಜನಪ್ರತಿನಿಧಿಗಳ ಗಮನ ಸೆಳೆದಿದೆ.

ಪ್ರಧಾನಿಗೆ ಪತ್ರದ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಎನ್.ಮಹೇಶ್ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು, ‘ಗ್ರಾಮೀಣ ಅಂಚೆ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಗಾರ್ಮೆಂಟ್ಸ್‌ನಲ್ಲಿ ದುಡಿಯುವ ಕಾರ್ಮಿಕರಿಗೂ ಭವಿಷ್ಯನಿಧಿ, ವೈದ್ಯಕೀಯ ಸೌಲಭ್ಯವಿದೆ. ಆದರೆ, ಗ್ರಾಮೀಣ ಅಂಚೆ ನೌಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಇಂತಹ ಕೇಂದ್ರ ಸರ್ಕಾರಕ್ಕೆ ನಾಚಿಕೆಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರವೂ ಶಿಕ್ಷಣ, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಯಾವುದೇ ಸೇವಾ ಭದ್ರತೆ ನೀಡದೇ ಕನಿಷ್ಠ ಕೂಲಿ ನೀಡುವ ಮೂಲಕ ದುಡಿಸಿಕೊಳ್ಳುತ್ತಿದೆ. ಇದು ಒಂದು ರೀತಿಯಲ್ಲಿ ಸರ್ಕಾರದ ಪ್ರಾಯೋಗಿಕ ಆಧುನಿಕ ಜೀತಪದ್ಧತಿ. ಇದರ ವಿರುದ್ಧ 20 ವರ್ಷಗಳಿಂದ ಹೋರಾಟ ಮಾಡಲಾಗಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿಯೂ ಚರ್ಚೆ ಮಾಡುತ್ತೇನೆ’ ಎಂದು ಹೇಳಿದರು.

ವಿಭಾಗೀಯ ಕಾರ್ಯದರ್ಶಿ ಎಂ.ಡಿ.ಶಿವಣ್ಣ, ಮಹೇಶ್‍ಪಾಳ್ಯ, ಎನ್‍ಯುಜಿಡಿಎಸ್ ಕಾರ್ಯದರ್ಶಿ ಮಾದೇಶ್‍ ಮಂಚಾಪುರ, ಬಿ.ಶೇಖಣ್ಣ, ಶಾಂತೇಶ್, ಮಾಳಿಗಯ್ಯ, ರಾಘವೇಂದ್ರ, ರಾಜರಾಂ, ಮಹದೇವಯ್ಯ, ವಿಭಾಗೀಯ ಸಂಘಟನೆಯ ಸಂಯೋಜಕ ರೇವಣ್ಣಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.