ಚಾಮರಾಜನಗರ: ಜಿಲ್ಲೆಯ 17 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಇಂಗ್ಲಿಷ್ ಕಲರವ ಕೇಳಿಬರಲಿದೆ!
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಹೊಸ ಶೈಕ್ಷಣಿಕದಿಂದ ಜಾರಿಗೆ ಬರಲಿದ್ದು, ಜಿಲ್ಲೆಯಲ್ಲಿ 17 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಜೂನ್ 1ರಿಂದ ಇಲ್ಲಿ ತರಗತಿಗಳು ಆರಂಭವಾಗಲಿವೆ. ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲು ಇಲಾಖೆ ಸಿದ್ಧತೆ ನಡೆಸಿದೆ.
ಈ 17 ಶಾಲೆಗಳಲ್ಲಿ ನಾಲ್ಕು ‘ಕರ್ನಾಟಕ ಪಬ್ಲಿಕ್ ಶಾಲೆ’ಗಳಾಗಿದ್ದು, ಇಲ್ಲಿ ಒಂದನೇ ತರಗತಿ ಮಾತ್ರವಲ್ಲದೇ, ಎಲ್‌ಕೆಜಿ, ಯುಕೆಜಿಯೂ ಆರಂಭವಾಗಲಿದೆ. ತಾಲ್ಲೂಕಿಗೆ ಒಂದರಂತೆ ಶಾಲೆಯನ್ನು ಗುರುತಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಒಟ್ಟು ಸೇರಿಸಿ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಹಾಗಾಗಿ, ಮೂರು ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಲ್ಲಿ ಇರುವ ಜಾಗವನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ. ಈ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಆಯ್ಕೆ ಮಾಡಲಾಗಿರುವ ಎಲ್ಲ ಶಾಲೆಗಳಲ್ಲೂರಾಜ್ಯ ಪಠ್ಯಕ್ರಮವೇ ಇರುತ್ತದೆ. ಪಬ್ಲಿಕ್ ಶಾಲೆ ಬಿಟ್ಟು ಉಳಿದ 13 ಶಾಲೆಗಳಲ್ಲಿ ಈ ವರ್ಷ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲಿದ್ದಾರೆ. ಮುಂದಿನ ವರ್ಷ ಇದು ಎರಡನೇ ತರಗತಿಗೆ ವಿಸ್ತರಣೆಯಾಗಲಿದೆ. ಹೀಗೆ ಅದು ಮುಂದುವರಿಯಲಿದೆ.
ಶಿಕ್ಷಕರ ನಿಯೋಜನೆ: ‘ಪಬ್ಲಿಕ್ ಶಾಲೆ ಬಿಟ್ಟು ಇತರ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದ 1ನೇ ತರಗತಿಗೆ ಮಾತ್ರ ಪ್ರವೇಶ ಪಡೆದುಕೊಳ್ಳಬೇಕು ಎಂದು ಸರ್ಕಾರದ ನಿರ್ದೇಶನವಿದೆ. ಎಲ್‌ಕೆಜಿ, ಯುಕೆಜಿಯಿಂದಲೂ ಇಂಗ್ಲಿಷ್ ಮಾಧ್ಯಮ ಆರಂಭಿಸಿದರೆ ಅನುಕೂಲವಾಗಲಿದೆ ಎನ್ನುವುದು ಶಿಕ್ಷಕರ ಅಭಿಪ್ರಾಯ. ಈ ಬಗ್ಗೆ ಸರ್ಕಾರಕ್ಕೆ ಇಲಾಖೆಯಿಂದ ಮನವಿ ಮಾಡಲಾಗುವುದು. 1ನೇ ತರಗತಿಯಿಂದ ಇಂಗ್ಲಿಷ್ ಪಾಠ ಮಾಡಲು ಪದವಿಯಲ್ಲಿ ಇಂಗ್ಲಿಷ್ ಅನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿರುವ ಶಿಕ್ಷಕರನ್ನು ಸರ್ಕಾರ ನೇಮಕಮಾಡಲಿದೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ (ಡಿಡಿಪಿಐ) ಮಂಜುಳ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಆಯ್ಕೆಯಾಗುವ ಎಲ್ಲ ಶಿಕ್ಷಕರಿಗೆ ಡಯಟ್ ಕೇಂದ್ರದಲ್ಲಿ ತರಬೇತಿ ನೀಡಿ, ಪರೀಕ್ಷೆ ನಡೆಸಿ ಶಾಲೆಗಳಿಗೆ ನಿಯೋಜನೆ ಮಾಡಲಾಗುತ್ತದೆ ಎಂದರು.
ಅರಿವು ಮೂಡಿಸಲಾಗುತ್ತಿದೆ: ‘ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಉದ್ದೇಶದಿಂದ ಇಲಾಖೆಯಿಂದ ಅರಿವು ಮೂಡಿಸಲಾಗುತ್ತಿದೆ. ಈ ಸಂಬಂಧ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಶಾಲೆಗಳಎಲ್ಲ ಮುಖ್ಯಶಿಕ್ಷಕರೊಂದಿಗೆ ಏಪ್ರಿಲ್‌ನಲ್ಲೇ ಸಭೆ ಕರೆದು ಮಾಹಿತಿ ನೀಡಲಾಗಿದೆ’ ಎಂದರು.
ಪ್ರವೇಶ ಪ್ರಕ್ರಿಯೆ: ಪ್ರವೇಶಾತಿ ಇನ್ನೂ ಪೂರ್ಣವಾಗಿ ಆರಂಭವಾಗಿಲ್ಲ. ಆಯಾ ಶಾಲೆಗಳಲ್ಲಿ 1ನೇ ತರಗತಿಗೆ 30 ಮಕ್ಕಳನ್ನು ಮಾತ್ರ ದಾಖಲು ಮಾಡಿಕೊಳ್ಳಲು ಅವಕಾಶ ಇದೆ. ಆಯಾ ಶಾಲಾ ವ್ಯಾಪ್ತಿಯಲ್ಲಿ ಪೋಷಕರ ಸಭೆ ನಡೆಸಿ, ಈ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ’ ಎಂದು ಅವರು ಹೇಳಿದರು.
‘ಶಾಲೆ ಬದಲಾವಣೆಗೆ ಪ್ರಸ್ತಾವ’
ಜಿಲ್ಲೆಯಲ್ಲಿ ಆಯ್ಕೆಯಾಗಿರುವ 17 ಶಾಲೆಗಳಲ್ಲಿ 2 ಶಾಲೆಗಳ ಬದಲಾವಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಯೋಚಿಸಿದೆ.
‘ಚಾಮರಾಜನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5, 6 ಹಾಗೂ 7ನೇ ತರಗತಿ ಮಾತ್ರ ಇದೆ. ಆದ್ದರಿಂದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ ಮಾಡಲು ಚಿಂತಿಸಲಾಗಿದೆ. ಅದೇ ರೀತಿ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಶಾಲೆಯಲ್ಲಿ ಮಕ್ಕಳ ಪ್ರವೇಶಾತಿ ಕಡಿಮೆ ಇರುವುದರಿಂದ ಬೊಮ್ಮಲಾಪುರ ಶಾಲೆ ಆಯ್ಕೆ ಮಾಡುವಂತೆ ಪ್ರಸ್ತಾವನೆ ಕಳುಹಿಸಲು ಯೋಚಿಸುತ್ತಿದ್ದೇವೆ’ ಎಂದು ಮಂಜುಳ ಅವರು ಹೇಳಿದರು.
ಯಾವ ಶಾಲೆಗಳು?
ಚಾಮರಾಜನಗರ ತಾಲ್ಲೂಕಿನ 5 ಶಾಲೆಗಳು, ಗುಂಡ್ಲುಪೇಟೆ ತಾಲ್ಲೂಕು 4, ಹನೂರು ತಾಲ್ಲೂಕು 4, ಕೊಳ್ಳೇಗಾಲ ತಾಲ್ಲೂಕು 2 ಹಾಗೂ ಯಳಂದೂರು ತಾಲ್ಲೂಕು 2 ಶಾಲೆಗಳು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಆಯ್ಕೆಯಾಗಿವೆ.
ಚಾಮರಾಜನಗರ: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ರಸ್ತಾವ ಸಲ್ಲಿಸಬೇಕು), ಅಮಚವಾಡಿ (ಹೊಸ ಬಡಾವಣೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಳಿಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಗುಂಡ್ಲುಪೇಟೆ: ತೆರಕಣಾಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಣ್ಣೂರು ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡ್ಲುಪೇಟೆ (ಊಟಿ ರಸ್ತೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಕೊಳ್ಳೇಗಾಲ: ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಡಿಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಹನೂರು: ಹನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, , ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸತ್ಯಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಯಳಂದೂರು: ಕೆಸ್ತೂರು ಹಿರಿಯ ಪ್ರಾಥಮಿಕ ಶಾಲೆ.
4 ಕರ್ನಾಟಕ ಪಬ್ಲಿಕ್ ಶಾಲೆಗಳು
ಚಂದಕವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಯಳಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಲೊಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತುಹಂಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.