ADVERTISEMENT

ಚಾಮರಾಜನಗರ- ನಾಳೆ, ನಾಡಿದ್ದು ಸಿಇಟಿ: 1,704 ಅಭ್ಯರ್ಥಿಗಳು

ಕೋವಿಡ್‌ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ವಿದ್ಯಾರ್ಥಿಗಳ ನೋಂದಣಿ

ಸೂರ್ಯನಾರಾಯಣ ವಿ
Published 14 ಜೂನ್ 2022, 16:33 IST
Last Updated 14 ಜೂನ್ 2022, 16:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಗಾಗಿ ಗುರುವಾರ ಹಾಗೂ ಶುಕ್ರವಾರ (ಜೂನ್‌ 16, 17) ರಾಜ್ಯದಾದ್ಯಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಂತಿಮ ಸಿದ್ಧತೆಯಲ್ಲಿ ತೊಡಗಿದೆ.

ಜಿಲ್ಲೆಯಲ್ಲಿ ಈ ವರ್ಷ 1,704 ಅಭ್ಯರ್ಥಿಗಳು ಸಿಇಟಿ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಕೋವಿಡ್‌ ಹಾವಳಿ ಇದ್ದ 2020 ಹಾಗೂ 2021ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಬರೆಯಲು ಮನಸ್ಸು ಮಾಡಿದ್ದಾರೆ.

2020ರಲ್ಲಿ 1,440 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. 2021ರಲ್ಲಿ ಈ ಸಂಖ್ಯೆ 1,584ಕ್ಕೆ ಏರಿತ್ತು. ಈ ವರ್ಷ 1,704 ಮಂದಿ ಸಿಇಟಿ ಬರೆಯಲಿದ್ದಾರೆ.

ADVERTISEMENT

ಆರು ಕೇಂದ್ರಗಳು: ಸಿಇಟಿಗಾಗಿ ಜಿಲ್ಲೆಯಲ್ಲಿ ಆರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಚಾಮರಾಜನಗರದಲ್ಲಿ ನಾಲ್ಕು ಹಾಗೂ ಕೊಳ್ಳೇಗಾಲದ ಎರಡು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಗುರುವಾರ ಬೆಳಗಿನ ಅವಧಿಯಲ್ಲಿ (10.30–11.50) ಜೀವ ವಿಜ್ಞಾನ, ಮಧ್ಯಾಹ್ನ ಮೇಲೆ (2.30–3.50) ಗಣಿತ ವಿಷಯದ ಪರೀಕ್ಷೆಗಳು ನಡೆಯಲಿವೆ. ಶುಕ್ರವಾರ ಬೆಳಿಗ್ಗೆ(10.30–11.50) ಭೌತವಿಜ್ಞಾನ ಹಾಗೂ ಮಧ್ಯಾಹ್ನದ ಮೇಲೆ(2.30–3.50) ರಸಾಯನ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷೆಗಳು 60 ಅಂಕಗಳಿಗೆ ನಡೆಯಲಿವೆ. ಒಂದೊಂದು ಅಂಕಗಳ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಒಎಂಆರ್‌ ಶೀಟ್‌ನಲ್ಲಿ ಉತ್ತರಿಸಬೇಕು.

ಷರತ್ತುಗಳು: ಕೋವಿಡ್‌ ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ‍ಪ‍ರೀಕ್ಷಾ ಸಮಯದಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯ ಪಾಲಿಸಲು ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಅಭ್ಯರ್ಥಿಗಳಿಗೆ ಅರೆ ಪಾರದರ್ಶಕವಾದ ಸರ್ಜಿಕಲ್‌ ಮಾಸ್ಕ್‌ ಮಾತ್ರ ಧರಿಸಬಹುದಾಗಿದೆ. ಬಟ್ಟೆ, ಎನ್‌–95 ಮಾಸ್ಕ್‌ ಸೇರಿದಂತೆ ಇತರೆ ಮಾಸ್ಕ್‌ಗಳನ್ನು ಧರಿಸುವಂತಿಲ್ಲ.

‘ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಕ್ರಮ ಎಸಗುವುದನ್ನು ತಡೆಯುವುದಕ್ಕಾಗಿ ಈ ನಿಯಮ ರೂಪಿಸಲಾಗಿದೆ. ಎನ್‌–95, ಬಟ್ಟೆಯ ಮಾಸ್ಕ್‌ಗಳಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಳಸಿ ಅಕ್ರಮ ಎಸಗುವ ಸಾಧ್ಯತೆ ಇರುವುದರಿಂದ ಪ್ರಾಧಿಕಾರ ಈ ನಿರ್ಧಾರಕ್ಕೆ ಬಂದಿದೆ’ ಎಂದು ಪದವಿ ಪೂರ್ವ ಇಲಾಖೆಯ ಉ‌ಪನಿರ್ದೇಶಕ ನಾಗಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೇ ರೀತಿಯ ಕೈಗಡಿಯಾರ, ಮೊಬೈಲ್‌, ಕ್ಯಾಲ್ಕುಲೇಟರ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವ‌ಂತಿಲ್ಲ. ಆಭರಣಗಳನ್ನು ಧರಿಸಿ ಬರುವವರಿಗೂ ಪರೀಕ್ಷೆಗೆ ಪ್ರವೇಶ ನೀಡುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರವು ಷರತ್ತುಗಳಲ್ಲಿ ಹೇಳಿದೆ.

ಯಾವುದೆಲ್ಲ ಕೇಂದ್ರಗಳು...?

ಚಾಮರಾಜನಗರದ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಂಕರಪುರದಲ್ಲಿರುವ ಸೇವಾಭಾರತಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲದ ಎಸ್‌ವಿಕೆ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಹಾಗೂ ಎಂಜಿಎಸ್‌ವಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿವೆ.

ಈ ಕೇಂದ್ರಗಳಲ್ಲಿ ಕ್ರಮವಾಗಿ360, 240, 240, 264, 336 ಹಾಗೂ 264 ಅಭ್ಯರ್ಥಿಗಳು ಸಿಇಟಿ ಬರೆಯಲಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆದಿದ್ದು, ಯಶಸ್ವಿಯಾಗಿ ಸಿಇಟಿ ನಡೆಸಲು ಎಲ್ಲ ಸಿದ್ಧತೆಗಳ‌ನ್ನೂ ಮಾಡಲಾಗಿದೆ
ನಾಗಮಲ್ಲೇಶ್‌, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.